ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಶ್ರೀ ಸಿದ್ಧೇಶ್ವರ ದೇವರ ಯುಗಾದಿ ಜಾತ್ರಾ ಮಹೋತ್ಸವ ಅತ್ಯಂತ ಸಡಗರದಿಂದ ಜರುಗಿತು. ಭಕ್ತರು ಕಿಚ್ಚು ಹಾಯುವ ಮೂಲಕ ತಮ್ಮ ಆರಾಧ್ಯ ದೈವಕ್ಕೆ ಭಕ್ತಿ ಪರಾಕಾಷ್ಠೆ ಮೆರೆದರು.
ಬೆಳಗಾವಿ: ತಾಲೂಕಿನ ಕಾಕತಿ ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಗ್ರಾಮದೇವತೆ ಶ್ರೀ ಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವವು ಸಡಗರ-ಸಂಭ್ರಮದಿಂದ ನೆರವೇರಿತು. ಇಂದು ಬೆಳಿಗ್ಗೆ ಸಾಂಪ್ರದಾಯಿಕವಾಗಿ ಅಂಬಲಿ ಗಾಡಿಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ತದನಂತರ ನಡೆದ ‘ಕಿಚ್ಚು ಹಾಯುವ’ ವಿಶಿಷ್ಟ ಆಚರಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಉರಿಯುವ ಕೆಂಡದ ಮೇಲೆ ನಡೆದು ತಮ್ಮ ಹರಕೆಯನ್ನು ತೀರಿಸಿದರು.

ಸಿದ್ಧೇಶ್ವರನ ನಾಮಸ್ಮರಣೆಯೊಂದಿಗೆ ಭಕ್ತರು ಕಿಚ್ಚು ಹಾಯುವ ದೃಶ್ಯಗಳು ಭಕ್ತಿಯ ಪರಾಕಾಷ್ಠೆಯನ್ನು ಸಾರಿದವು. ಗ್ರಾಮದ ಹಿರಿಯರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಯುಗಾದಿಯ ಈ ಸಂದರ್ಭದಲ್ಲಿ ಗ್ರಾಮದೇವತೆಯ ಕೃಪೆಗೆ ಪಾತ್ರರಾಗಲು ಸುತ್ತಮುತ್ತಲಿನ ಹಳ್ಳಿಗಳಿಂದಲೂ ಸಾವಿರಾರು ಜನರು ಆಗಮಿಸಿದ್ದು, ಕಾಕತಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ
