Bagalkot

ಬಾಗಲಕೋಟೆ ಉಪಸಮರಕ್ಕೆ ಜಾರಕಿಹೊಳಿ ವಾರಸುದಾರ ಎಂಟ್ರಿ: ಕಾಂಗ್ರೆಸ್ ಅಭ್ಯರ್ಥಿ ಪರ ರಾಹುಲ್ ಅಬ್ಬರದ ಪ್ರಚಾರ; ಸತೀಶ್ ಜಾರಕಿಹೊಳಿ ಕುರಿತ ಶ್ರೀರಾಮುಲು ಹೇಳಿಕೆಗೆ ಖಡಕ್ ಟಾಂಗ್!

Share

ಬಾಗಲಕೋಟೆ ಉಪಚುನಾವಣೆಯ ಅಖಾಡ ಈಗ ರಂಗೇರಿದೆ. ಸಚಿವ ಸತೀಶ್ ಜಾರಕಿಹೊಳಿ ಪುತ್ರ ಹಾಗೂ ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಅವರು ಇಂದು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಅಬ್ಬರದ ಪ್ರಚಾರ ನಡೆಸಿದರು. ಇದೇ ವೇಳೆ ತಮ್ಮ ತಂದೆಯವರ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದ ಬಿಜೆಪಿ ನಾಯಕ ಶ್ರೀರಾಮುಲು ಅವರಿಗೆ ರಾಹುಲ್ ಜಾರಕಿಹೊಳಿ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.

ಬಾಗಲಕೋಟೆ ಕ್ಷೇತ್ರದ ಶಿರೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇಂದು ರಾಹುಲ್ ಜಾರಕಿಹೊಳಿ ಸಂಚಲನ ಮೂಡಿಸಿದರು. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಮನೆ ಮನೆಗೆ ತೆರಳಿ ಮತಯಾಚಿಸಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನಾಶೀರ್ವಾದ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು. “ನಮಗೂ ಕೂಡ ಇದೊಂದು ದೊಡ್ಡ ಅವಕಾಶ. ಉಪಚುನಾವಣೆಗಳಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಕಲಿಯುತ್ತಿದ್ದೇವೆ” ಎಂದು ವಿನಯದಿಂದಲೇ ನುಡಿದ ರಾಹುಲ್, ಸತೀಶ್ ಜಾರಕಿಹೊಳಿ ಅವರನ್ನು ‘ಸೀಸನಲ್ ಪೋಲಿಟಿಷಿಯನ್’ ಎಂದು ಲೇವಡಿ ಮಾಡಿದ್ದ ಶ್ರೀರಾಮುಲು ಅವರಿಗೆ ತಿರುಗೇಟು ನೀಡಿದರು. “ಶ್ರೀರಾಮುಲು ಅವರು ನಮ್ಮ ಸಮುದಾಯದ ಹಿರಿಯ ನಾಯಕರು ನಿಜ. ಆದರೆ ಸತೀಶ್ ಜಾರಕಿಹೊಳಿ ಅವರ ಸಮಾಜಮುಖಿ ಸೇವೆ ಮತ್ತು ಕೊಡುಗೆ ಏನೆಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ. ಜನ ಜಾಣರಿದ್ದಾರೆ, ಯಾರ ಹಿಂದೆ ನಿಂತರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂಬ ಅರಿವು ಅವರಿಗಿದೆ” ಎಂದು ರಾಹುಲ್ ಸ್ಪಷ್ಟಪಡಿಸಿದರು.

ಇನ್ನು ಚುನಾವಣಾ ತಂತ್ರಗಾರಿಕೆಯ ಬಗ್ಗೆ ಮಾತನಾಡಿದ ಅವರು, ಪ್ರತಿ ಕ್ಷೇತ್ರಕ್ಕೂ ಸತೀಶ್ ಜಾರಕಿಹೊಳಿ ಅವರದ್ದೇ ಆದ ವಿಭಿನ್ನ ಸ್ಟ್ರ್ಯಾಟರ್ಜಿ ಇರುತ್ತದೆ. ಆಂತರಿಕವಾಗಿ ಅವರು ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣಾ ಸಮಯದಲ್ಲಿ ಅನುದಾನ ಘೋಷಣೆ ಮಾಡುತ್ತಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ಎಲ್ಲಾ ಅನುದಾನಗಳು ಅಧಿಕೃತವಾಗಿ ಘೋಷಣೆಯಾಗಿವೆ. ಜನರ ದೀರ್ಘಕಾಲದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದೆ. ಇದು ಕೇವಲ ಬಾಗಲಕೋಟೆಗೆ ಸೀಮಿತವಲ್ಲ, ರಾಜ್ಯಾದ್ಯಂತ ಎಲ್ಲೆಲ್ಲಿ ಸಮಸ್ಯೆಗಳಿವೆಯೋ ಅಲ್ಲಿ ಇಲಾಖೆ ಹಾಗೂ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಲಾಗುತ್ತಿದೆ” ಎಂದರು. ರಾಹುಲ್ ಜಾರಕಿಹೊಳಿ ಅವರ ಪ್ರಚಾರದಿಂದಾಗಿ ಬಾಗಲಕೋಟೆ ಕಾಂಗ್ರೆಸ್ ಪಾಳೆಯದಲ್ಲಿ ಹೊಸ ಸಂಚಲನ ಮೂಡಿದೆ.

Tags:

error: Content is protected !!