ಮಹಿಳೆಯ ಸಬಲೀಕರಣವೇ ಸಮಾಜದ ಸಮಗ್ರ ಅಭಿವೃದ್ಧಿಗೆ ಬುನಾದಿ. ಮಹಿಳೆಯರು ಸಬಲರಾದರೆ ಕುಟುಂಬ ಹಾಗೂ ಸಮಾಜವೂ ಶಕ್ತಿಯುತವಾಗುತ್ತದೆ” ಎಂಬ ಸಂದೇಶದೊಂದಿಗೆ ಕಾಗವಾಡದ ವೀರ ಮಹಿಳಾ ಮಂಡಳದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಭಗವಾನ್ ಮಹಾವೀರ ದಿಗಂಬರ ಜೈನ ಮಂದಿರದ ಸಭಾಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗಾಗಿ ವಿಶೇಷ “ಹೋಂ ಮಿನಿಸ್ಟರ್” ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ವಿಜೇತರಿಗೆ ಪೈಠಣಿ ಸೀರೆಗಳನ್ನು ಬಹುಮಾನವಾಗಿ ನೀಡಲಾಯಿತು.

ವೀರ ಮಹಿಳಾ ಮಂಡಳವು ಕಳೆದ 21 ವರ್ಷಗಳಿಂದ ಗ್ರಾಮದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಯುವಕರಿಗೆ ಸಂಸ್ಕಾರ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ವಿಶೇಷವಾಗಿ ದುಷ್ಟ ಚಟಗಳಿಂದ ದೂರವಿರಲು ಹಾಗೂ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಂಡಳಿಯು ನಿರಂತರವಾಗಿ ಕೈಗೊಳ್ಳುತ್ತಿದೆ.
ಮಹಿಳಾ ದಿನಾಚರಣೆಯ ಅಂಗವಾಗಿ ಮಿರಜದ ಖ್ಯಾತ ವೈದ್ಯರಾದ ಡಾ. ಕವಿತಾ ಮಗದುಮ್, ಕಾಗವಾಡದ ಯುವತಿ ಮಹಿಳಾ ಮಂಡಳದ ಹಿರಿಯ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಪಟವರ್ಧನ್, ಫೆಡರಲ್ ಬ್ಯಾಂಕಿನ ವ್ಯವಸ್ಥಾಪಕಿ ಅರ್ಚನಾ ದೇಶಪಾಂಡೆ, ಆಲ್ಕಾ ಮೊಳೆ ಹಾಗೂ ಕಾಗವಾಡ ಜೈನ್ ಸಮಾಜದ ಅಧ್ಯಕ್ಷರಾದ ನ್ಯಾಯವಾದಿ ತಾತ್ಯಾಸಾಹೇಬ್ ಧೊತರೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಹೋಂ ಮಿನಿಸ್ಟರ್ ವಿಶೇಷ ಕಾರ್ಯಕ್ರಮವನ್ನು ಕಲಾವಿದ ಪ್ರಜೋತ್ ಉಪಾಧ್ಯ ಅಚ್ಚುಕಟ್ಟಾಗಿ ನಿರ್ವಹಿಸಿದರು. ಇದೇ ವೇಳೆ ಜೈನ ಧರ್ಮಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಮೇಲೆ ಪ್ರಶ್ನೋತ್ತರ ಕಾರ್ಯಕ್ರಮವೂ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಾದ ದಿವ್ಯ ಚೌಗುಲೆ, ಪ್ರಜ್ಞಾ ಚೌಗುಲೆ ಹಾಗೂ ಪಾಂಚಾಲಿ ಕಿನಿಂಗೆ ಅವರು ಪೈಠಣಿ ಸೀರೆಗಳನ್ನು ಬಹುಮಾನವಾಗಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ವೀರ ಮಹಿಳಾ ಮಂಡಳದ ಅಧ್ಯಕ್ಷೆ ರಾಧಿಕಾ ಮಗದುಮ್ ಹಾಗೂ ಸದಸ್ಯೆ ಉಜ್ವಲಾ ಕರವ ಅವರು, ಕಳೆದ 21 ವರ್ಷಗಳಿಂದ ವೀರ ಮಹಿಳಾ ಮಂಡಳದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆ ಕೈಗೊಳ್ಳಲಾಗಿದೆ. ಮಹಿಳೆಯರ ಸಮಸ್ಯೆಗಳನ್ನು ಆಲಿಸುವುದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ಯುವತಿಯರಿಗೆ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳ ಬಗ್ಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಹೋಂ ಮಿನಿಸ್ಟರ್ ಕಾರ್ಯಕ್ರಮಕ್ಕಾಗಿ ಸ್ಥಳೀಯ ಭವಾನಿ ಜುವೆಲರ್ಸ್ ವತಿಯಿಂದ ಮೂರು ಪೈಠಣಿ ಸೀರೆಗಳು ಹಾಗೂ ಅಭಿರುಚಿ ಹೋಟೆಲ್ ಮತ್ತು ಚೌಗುಲೆ ಕಿರಣಾ ಸ್ಟೋರ್ಸ್ ವತಿಯಿಂದ ವಿಶೇಷ ಸಹಕಾರ ದೊರೆತಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸಹಕಾರ ನೀಡಿದವರನ್ನು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರನ್ನು ಅತಿಥಿಗಳು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ವೀರ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಸಾರಿಕಾ ಮಗದುಮ್, ನಮಿತಾ ಕರವ, ಅರುಣಾ ಕರವ, ಪ್ರಿಯಾ ಐನಾಪುರೆ, ಕವಿತಾ ಮಗದುಮ್ ಸೇರಿದಂತೆ ಮಹಿಳಾ ಮಂಡಳದ ಸದಸ್ಯರು ಹಾಗೂ ಜೈನ ಸಮಾಜದ ಅಧ್ಯಕ್ಷ ನ್ಯಾಯವಾದಿ ತಾತ್ಯಾಸಾಹೇಬ್ ಧೊತರೆ ಮತ್ತು ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
