ರಾಜ್ಯದಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ನಾಗಮೋಹದಾಸ್ ಆಯೋಗ ನೀಡಿರುವ ವರದಿ ಅವೈಜ್ಞಾನಿಕವಾಗಿದ್ದು, ದಲಿತ ಸಮುದಾಯದ ಬಲಗೈ ಬಣಗಳಿಗೆ ಗಂಭೀರ ಅನ್ಯಾಯವಾಗಿದೆ ಎಂದು ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವನಾಗಿ ದೇವ ಸ್ವಾಮೀಜಿ ಕಿಡಿಕಾರಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಣ್ಣ ಸಮಸ್ಯೆಯನ್ನು ದೊಡ್ಡದಾಗಿಸಿ ಬಲಗೈ ಸೇರಿ ಹಲವು ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ನಾಗಮೋಹದಾಸ್ ಆಯೋಗದ ವರದಿಯಲ್ಲಿ ಉದ್ದೇಶಪೂರ್ವಕವಾಗಿ ಬಲಗೈ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದ್ದು, ಈ ವರದಿಯನ್ನು ತಕ್ಷಣ ಮರುಪರಿಶೀಲನೆಗೆ ಒಳಪಡಿಸಬೇಕು. ಸರ್ಕಾರವೇ ದೌರ್ಜನ್ಯ ನಡೆಸುತ್ತಿರುವಂತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಅವೈಜ್ಞಾನಿಕವಾಗಿರುವ ಒಳಮೀಸಲಾತಿ ಹಂಚಿಕೆಯನ್ನು ಮಾನ್ಯ ಮಾಡಬಾರದು. ತಪ್ಪಿದ್ದಲ್ಲಿ ಕಾನೂನು ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಮಾ.27ರಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಕುರಿತು ನಿರ್ಣಯ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದರು. ಆದರೆ, ಇದುವರೆಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ವಿಧಾನಸಭೆ ಉಪಚುನಾವಣೆ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಇನ್ನು ರವಿ ಬಸ್ತವಾಡಕರ ಅವರು ಸರ್ಕಾರ ಯೋಗ್ಯ ನಿರ್ಣಯ ಕೈಗೊಳ್ಳಲಿದೆ ಎಂಬ ಭರವಸೆಯಿದೆ. ಸರ್ಕಾರ ಮಾತು ತಪ್ಪಿದರೇ, ಮುಂಬರುವ ದಿನಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಪ್ರಯತ್ನಿಸಲಾಗುವುದು. ಮೈಸೂರಿನಲ್ಲಿರುವ ಡಾ. ಅಂಬೇಡ್ಕರ್ ವಿವಿಧೋದ್ಧೇಶ ಸಹಕಾರಿ ಸಂಘವನ್ನು ಬೆಳಗಾವಿಗೆ ತರಬೇಕೆಂದು ಆಗ್ರಹಿಸಿದಾಗ ಚಿಕ್ಕೋಡಿಯಲ್ಲಿ ಇದರ ಶಾಖೆಯನ್ನು ಆರಂಭಿಸಲಾಗುತ್ತಿದೆ. ಇದು ಉದ್ಯೋಗ ವ್ಯವಸಾಯಗಳನ್ನು ಬೆಳೆಸಲು ಪೂರಕವಾಗಿದೆ. ನಾಳೆ ಗಣ್ಯರು ಉಪಸ್ಥಿತಿಯಲ್ಲಿ ಇದರ ಉದ್ಘಾಟನೆ ನಡೆಯಲಿದೆ ಎಂದರು.
ಇನ್ನು ದುರ್ಗೇಶ ಮೇತ್ರಿ ಅವರು ಬೆಂಗಳೂರಿನ ಫ್ರೀರ್ಡಂ ಪಾರ್ಕ’ನಲ್ಲಿ ಸುಮಾರು 5-6 ಲಕ್ಷ ಚಲವಾದಿ ಬಾಂಧವರು ಭಾಗಿಯಾಗಿ ಅವಿಸ್ಮರಣೀಯ ಹೋರಾಟವನ್ನು ಮಾಡಿದ್ದಾರೆ. ನಮ್ಮ ಮೇಲಾದ ಅನ್ಯಾಯದ ವಿರುದ್ಧ ನಾವು ಒಗ್ಗಟ್ಟಾಗಿ ಧ್ವನಿ ಎತ್ತುತ್ತೇವೆ ಎಂದರು.
ಮಾಧ್ಯಮಗೋಷ್ಟಿಯಲ್ಲಿ ಎವಿಎಸ್‌ಎಸ್ ಸಂಸ್ಥಾಪಕ ಅಧ್ಯಕ್ಷ ತುಂಬಲ ರಾಮಣ್ಣ, ಬಂಗವಾದಿ ನಾರಾಯಣಪ್ಪ, ದುರ್ಗೇಶ ಮೇತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
