Vijaypura

ಕಟ್ಟಿಗೆ ಒಲೆಗೆ ಮೊರೆ ಹೋದ ಇಂದಿರಾ ಕ್ಯಾಂಟೀನ್ – ಸಿಲಿಂಡರ್ ಅಭಾವದಿಂದ ವಿಜಯಪುರದಲ್ಲಿ ಅಡುಗೆ ಸಂಕಷ್ಟ!

Share

ಗಲ್ಪ್ ರಾಷ್ಟ್ರಗಳ ನಡುವಿನ ಯುದ್ದದ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಅಭಾವ ತೀವ್ರಗೊಂಡಿದ್ದು, ಇದರ ನೇರ ಪರಿಣಾಮ ಇಂದಿರಾ ಕ್ಯಾಂಟೀನ್ ಹಾಗೂ ಹೋಟೆಲ್‌ಗಳ ಮೇಲೆ ಬಿದ್ದಿದೆ. ಸಿಲಿಂಡರ್ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆ, ಹಲವು ಕ್ಯಾಂಟೀನ್‌ಗಳಲ್ಲಿ ಅಡುಗೆ ಕಾರ್ಯವೇ ಅಸ್ತವ್ಯಸ್ತಗೊಂಡಿದೆ.

ನಗರದ ಇಂದಿರಾ ಕ್ಯಾಂಟೀನ್‌ಗಳು ಸಿಲಿಂಡರ್ ಕೊರತೆಯಿಂದಾಗಿ ಕಟ್ಟಿಗೆ ಒಲೆಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ಜಿಲ್ಲೆಯ ಎರಡು ಇಂದಿರಾ ಕ್ಯಾಂಟೀನ್‌ಗಳು ಸಂಪೂರ್ಣ ಮುಚ್ಚಲ್ಪಟ್ಟಿದ್ದು, ಉಳಿದ ಆರು ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇನ್ನೂ ಹೋಟೆಲ್‌ಗಳಿಗೂ ಈ ಸಮಸ್ಯೆ ತೀವ್ರವಾಗಿ ತಟ್ಟಿದ್ದು, ಕಮರ್ಷಿಯಲ್ ಗ್ಯಾಸ್ ಸಿಗದ ಕಾರಣ ಅನೇಕ ಹೋಟೆಲ್ ಮಾಲೀಕರು ಕಟ್ಟಿಗೆ ಒಲೆಗಳಲ್ಲಿ ಅಡುಗೆ ಮಾಡುವ ಅನಿವಾರ್ಯತೆಗೆ ತಳ್ಳಲ್ಪಟ್ಟಿದ್ದಾರೆ. ಗ್ರಾಹಕರಿಗೆ ಸೇವೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಈ ಕುರಿತು ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಪ್ರಶಾಂತ್ ಮಾತನಾಡಿ, ಸಿಲಿಂಡರ್ ಪೂರೈಕೆ ಸ್ಥಗಿತದಿಂದ ಹೋಟೆಲ್ ವಲಯ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಕೂಡಲೇ ಸಮಸ್ಯೆ ಪರಿಹರಿಸಿ, ಕಮರ್ಷಿಯಲ್ ಗ್ಯಾಸ್ ಪೂರೈಕೆಯನ್ನು ಸರಾಗಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಒಟ್ಟಾರೆ, ಗ್ಯಾಸ್ ಅಭಾವದಿಂದ ವಿಜಯಪುರದಲ್ಲಿ ಅಡುಗೆ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿದ್ದು, ತಕ್ಷಣದ ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಕ್ಯಾಂಟೀನ್ ಹಾಗೂ ಹೋಟೆಲ್‌ಗಳು ಮುಚ್ಚುವ ಭೀತಿ ಎದುರಾಗಿದೆ.

Tags:

error: Content is protected !!