BELAGAVI

ವಿಶ್ವಕಪ್ ಮೇಲೆ ಭಾರತದ ಕಣ್ಣು: ಅಹಮದಾಬಾದ್ ಹೈವೋಲ್ಟೇಜ್ ಫೈನಲ್‌ಗೆ ಗಣಪನ ಮೊರೆ ಹೋದ ಕರವೇ ಪಡೆ!

Share

ವಿಶ್ವ ಕ್ರಿಕೆಟ್‌ನ ಸುಲ್ತಾನ ಯಾರು ಎಂಬ ನಿರ್ಧಾರಕ್ಕೆ ಅಹಮದಾಬಾದ್ ಅಖಾಡ ಸಜ್ಜಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಈ ಮಹಾ ಸಮರದಲ್ಲಿ ಸೂರ್ಯಕುಮಾರ್ ಪಡೆಗೆ ಗೆಲುವು ಸಿಗಲಿ ಎಂದು ಬೆಳಗಾವಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಹೈವೋಲ್ಟೇಜ್ ಟಿ-20 ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ನಗರದ ಪ್ರಮುಖ ಕೇಂದ್ರವಾದ ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಗಣೇಶ ದೇವಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ತಂಡದ ಯಶಸ್ಸಿಗಾಗಿ ವಿಶೇಷ ಪೂಜೆ ನೆರವೇರಿಸಿದರು. “ಗೆದ್ದು ಬಾ ಭಾರತ” ಎಂಬ ಘೋಷವಾಕ್ಯದೊಂದಿಗೆ ವಿಘ್ನೇಶ್ವರನಿಗೆ ಹರಕೆ ಹೊತ್ತ ಕಾರ್ಯಕರ್ತರು, ಟೀಮ್ ಇಂಡಿಯಾ ವಿಶ್ವಕಪ್ ಎತ್ತಿ ಹಿಡಿಯಲಿ ಎಂದು ಶುಭ ಹಾರೈಸಿದರು.

ಕರವೇ ಅಧ್ಯಕ್ಷ ದೀಪಕ್ ಗುಡಗನಟ್ಟಿ ಹಾಗೂ ಸುರೇಶ್ ಗವನ್ನವರ್ ನೇತೃತ್ವದಲ್ಲಿ ನಡೆದ ಈ ಪೂಜಾ ಕಾರ್ಯಕ್ರಮದಲ್ಲಿ ಅಭಿಮಾನಿಗಳು ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಚಾತುರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದರು. ಪ್ರಮುಖವಾಗಿ ಮಾರಕ ವೇಗಿ ಜಸ್ಪ್ರೀತ್ ಬೂಮ್ರಾ ಅವರ ಬೌಲಿಂಗ್ ಹಾಗೂ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ಕಣದಲ್ಲಿ ಮಿಂಚಲಿ ಎಂದು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ದೇವಸ್ಥಾನದ ಆವರಣದಲ್ಲಿ ಭಾರತೀಯ ಧ್ವಜವನ್ನು ಹಿಡಿದು ಕ್ರಿಕೆಟ್ ಪ್ರೇಮಿಗಳು ತಂಡದ ವಿಜಯೋತ್ಸವಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

Tags:

error: Content is protected !!