ಇರಾನ್, ಇಸ್ರೇಲ್ ಹಾಗೂ ಅಮೆರಿಕಾ ನಡುವೆ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯನ್ನು ತಡೆಯಲು ಭಾರತ ಮಧ್ಯಪ್ರವೇಶ ಮಾಡಬೇಕು ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.
ಗುರುವಾರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿಗಳು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಈ ಕುರಿತು ಸಲಹೆ ನೀಡಿದರು.
ಇರಾಕ್, ಇರಾನ್, ಇಸ್ರೇಲ್ ಹಾಗೂ ಕೊಲ್ಲಿ ರಾಷ್ಟ್ರಗಳ ಭಾಗದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರುವುದು ವಿಷಾದನೀಯ. ಇಂತಹ ಯುದ್ಧಗಳು ನಡೆಯಬಾರದು. ಯುದ್ಧವನ್ನು ನಿಲ್ಲಿಸಲು ಭಾರತ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ಭಾರತವು ಪ್ರಾಚೀನ ಕಾಲದಿಂದಲೂ ವಿಶ್ವ ಶಾಂತಿಯ ಸಂದೇಶವನ್ನು ಸಾರಿಕೊಂಡು ಬಂದಿದೆ. ಹೀಗಾಗಿ ಯುದ್ಧ ನಿಲ್ಲಿಸುವ ಪ್ರಯತ್ನ ಭಾರತ ಮಾಡಬೇಕು. ಇದರಿಂದ ಭಾರತದ ಗೌರವವೂ ವಿಶ್ವದ ಮಟ್ಟದಲ್ಲಿ ಹೆಚ್ಚಾಗಲಿದೆ ಎಂದು ಅವರು ಹೇಳಿದರು.
ಇದೇ ವೇಳೆ ದೇಶದಲ್ಲಿ ಏಕ ರೂಪ ಕಾನೂನು ಜಾರಿಗೆ ತರಬೇಕಿದ್ದು, ಅದನ್ನು ಶೀಘ್ರ ಜಾರಿಗೆ ತರಲು ಉಪರಾಷ್ಟ್ರಪತಿಗಳು ಕ್ರಮವಹಿಸಬೇಕು ಎಂದು ಸ್ವಾಮೀಜಿಗಳು ಮನವಿ ಮಾಡಿದರು.

