ಅಂಗನವಾಡಿ ಕೇಂದ್ರಗಳಲ್ಲಿ LKG-UKG ಪ್ರಾರಂಭಿಸುವ ಸರ್ಕಾರದ ನಿರ್ಧಾರದ ವಿರುದ್ಧ ಮತ್ತು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಅಂಗನವಾಡಿ ನೌಕರರು ಸಿಡಿದೆದ್ದಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಿರುವ ನೌಕರರು, ಮಾರ್ಚ್ 23ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.”


ಪ್ರಮುಖವಾಗಿ 6 ವರ್ಷದೊಳಗಿನ ಮಕ್ಕಳ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲೇ ಖಾತ್ರಿಪಡಿಸಬೇಕೆಂದು ಒತ್ತಾಯಿಸಿದರು. ಶಿಕ್ಷಣ ಇಲಾಖೆಯು ಪ್ರತ್ಯೇಕವಾಗಿ ಶಾಲೆಗಳಲ್ಲಿ LKG-UKG ಪ್ರಾರಂಭಿಸುತ್ತಿರುವುದರಿಂದ ಅಂಗನವಾಡಿಗಳಲ್ಲಿನ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ಆದೇಶವನ್ನು ರದ್ದುಗೊಳಿಸಿ, ಅಂಗನವಾಡಿಗಳಲ್ಲೇ ಈ ತರಗತಿಗಳನ್ನು ಬಲಪಡಿಸಬೇಕು. ರಾಜ್ಯದ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ತಲುಪಿಸುವಲ್ಲಿ ದುಡಿಯುತ್ತಿರುವ ತಮಗೆ ಸೂಕ್ತ ಗೌರವಧನ ಹೆಚ್ಚಳ ಮಾಡದಿರುವುದು ತೀವ್ರ ನಿರಾಸೆ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಂಗನವಾಡಿ ನೌಕರರನ್ನು ಕನಿಷ್ಠ ಕೂಲಿ ಕಾಯ್ದೆಯ ವ್ಯಾಪ್ತಿಗೆ ತರುವುದು, ನಿವೃತ್ತ ಕಾರ್ಯಕರ್ತೆಯರಿಗೆ ಬಾಕಿ ಇರುವ 183 ಕೋಟಿ ರೂಪಾಯಿ ಗ್ರಾಚ್ಯುಟಿ ಹಣ ಬಿಡುಗಡೆ ಮಾಡುವುದು, ಮತ್ತು ಎಲೆಕ್ಷನ್ ಕೆಲಸಗಳಿಂದ ನೌಕರರನ್ನು ಮುಕ್ತಗೊಳಿಸುವುದು ಸೇರಿದಂತೆ 18 ಪ್ರಮುಖ ಬೇಡಿಕೆಗಳನ್ನು ಸಂಘವು ಮುಂದಿಟ್ಟಿದೆ. ಇಂದಿನ ಬೇಡಿಕೆಗಳಿಗೆ ಸರ್ಕಾರ ಸೂಕ್ತ ಸ್ಪಂದನೆ ನೀಡದಿದ್ದರೆ, ಮಾರ್ಚ್ 23 ರಿಂದ ಬೆಂಗಳೂರಿನಲ್ಲಿ ಬೃಹತ್ ಅನಿರ್ದಿಷ್ಟಾವಧಿ ಹೋರಾಟವನ್ನು ಕೈಗೊಳ್ಳುವುದಾಗಿ ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಂದಾ ನೇವತಿ, ಸುವರ್ಣಾ ಮೋರೆ, ಲಕ್ಷ್ಮೀ ನಾಯಕ್, ಉಲ್ಕಾ, ಪುಷ್ಪಾ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
