ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಇದೀಗ ಬೆಳಗಾವಿಯ ಎಪಿಎಂಸಿಗೂ ತಟ್ಟಿದೆ. ಇಂಧನ ಬೆಲೆ ಏರಿಕೆ ಹಾಗೂ ಹೊರ ರಾಜ್ಯದ ಹೋಟೆಲ್‌ಗಳ ಬಂದ್‌ನಿಂದಾಗಿ ತರಕಾರಿ ಸಾಗಾಟ ಸ್ಥಗಿತಗೊಂಡಿದ್ದು, ರೈತರು ಮತ್ತು ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಕರ್ನಾಟಕದ ಎರಡನೇ ಅತಿದೊಡ್ಡ ಮಾರುಕಟ್ಟೆಯಾದ ಬೆಳಗಾವಿ ಎಪಿಎಂಸಿಯಲ್ಲಿ, ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ತರಕಾರಿ ವ್ಯಾಪಾರ ಭಾರಿ ಕುಸಿತ ಕಂಡಿದೆ. ಗೋವಾ, ಮಹಾರಾಷ್ಟ್ರ ಮತ್ತು ಮಂಗಳೂರು ಭಾಗಗಳಿಗೆ ನಿತ್ಯವೂ ಪೂರೈಕೆಯಾಗುತ್ತಿದ್ದ ತರಕಾರಿಗಳು, ಅನಿಲ ಸಿಲಿಂಡರ್ ಅಭಾವದಿಂದಾಗಿ ಆ ಭಾಗದ ಹೋಟೆಲ್‌ಗಳು ಹಾಗೂ ಕ್ಯಾಂಟೀನ್‌ಗಳು ಬಂದ್ ಆಗಿರುವ ಕಾರಣ ಬೇಡಿಕೆ ಕಳೆದುಕೊಂಡಿವೆ. ಇಂಧನ ದರ ಏರಿಕೆಯು ಸಾಗಾಟ ವೆಚ್ಚವನ್ನು ದುಬಾರಿಯಾಗಿಸಿದ್ದು, ಇದರಿಂದಾಗಿ ಸಾಗಾಟ ಸರಪಳಿಯೇ ಅಸ್ತವ್ಯಸ್ತಗೊಂಡಿದೆ.


ಈ ಆರ್ಥಿಕ ಹಿನ್ನಡೆಯಿಂದಾಗಿ ಬೆಳಗಾವಿ ಎಪಿಎಂಸಿಯಲ್ಲಿ ನಡೆಯುತ್ತಿದ್ದ ನಿತ್ಯದ ಸುಮಾರು 2 ಕೋಟಿ ರೂಪಾಯಿಗಳ ವಹಿವಾಟು ಈಗ ಕೇವಲ 1 ಕೋಟಿ ರೂಪಾಯಿಗೆ ಕುಸಿದಿದೆ. ಅಂದರೆ ವ್ಯಾಪಾರವು ಶೇಕಡಾ 50ರಷ್ಟು ಕಡಿಮೆಯಾಗಿದ್ದು, ರೈತರು ಕಳೆದ ಮೂರ್ನಾಲ್ಕು ತಿಂಗಳು ಕಷ್ಟಪಟ್ಟು ಬೆಳೆದ ತರಕಾರಿಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಮಾರಾಟವಾಗದೆ ಉಳಿದ ತರಕಾರಿಗಳು ಕೊಳೆಯುತ್ತಿದ್ದು, ರೈತರು ತಾವು ಹಾಕಿದ ಬಂಡವಾಳವನ್ನೂ ಮರಳಿ ಪಡೆಯಲಾಗದೆ ಕಂಗಾಲಾಗಿದ್ದಾರೆ.

ಈ ಬಗ್ಗೆ ಎಪಿಎಂಸಿ ತರಕಾರಿ ಸಗಟು ವ್ಯಾಪಾರಿ ಸಂಘದ ನಿರ್ದೇಶಕ ಸತೀಶ್ ಪಾಟೀಲ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುದ್ಧದ ಪರಿಸ್ಥಿತಿಯಿಂದ ಉಂಟಾಗಿರುವ ಪೂರೈಕೆ ಕೊರತೆ ಮತ್ತು ಬೆಲೆ ಏರಿಕೆಯು ನೇರವಾಗಿ ಬಡ ರೈತರು ಮತ್ತು ವ್ಯಾಪಾರಿಗಳ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಅವರು ತಿಳಿಸಿದ್ದಾರೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಸಾರಿಗೆ ವ್ಯವಸ್ಥೆ ಹಾಗೂ ವ್ಯಾಪಾರ ಉತ್ತೇಜನಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕದಿದ್ದರೆ, ಮುಂದಿನ ದಿನಗಳಲ್ಲಿ ತರಕಾರಿ ಬೆಳೆಗಾರರು ತೀವ್ರತರವಾದ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.

