ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಗಡಿಭಾಗದ ಹಾಗೂ ಹಿಂದುಳಿದ ತಾಲೂಕು ಎಂದು ಗುರುತಿಸಲ್ಪಡುವ ಖಾನಾಪುರ ತಾಲೂಕು ಈಗ ಮಹಿಳೆಯರ ಸಬಲೀಕರಣದಿಂದಾಗಿ ಅಭಿವೃದ್ಧಿಯ ಪಥದಲ್ಲಿ ಸಾಗಿದೆ. “ನಾವು ಯಾರಿಗಿಂತಲೂ ಕಡಿಮೆ ಇಲ್ಲ” ಎಂದು ಇಲ್ಲಿನ ಮಹಿಳೆಯರು ಸಾಬೀತುಪಡಿಸಿದ್ದಾರೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ…

ಖಾನಾಪುರದ ಇತಿಹಾಸದಲ್ಲಿ ಮಹಿಳೆಯರ ಸಾಧನೆ ಅಪಾರ. ಈ ಪಟ್ಟಿಯಲ್ಲಿ ಮೊಟ್ಟಮೊದಲ ಸ್ಥಾನದಲ್ಲಿ ನಿಲ್ಲುವವರು ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್. ತಾಲೂಕಿನ ಇತಿಹಾಸದಲ್ಲೇ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸುವ ಮೂಲಕ, ಖಾನಾಪುರದ ಪ್ರಥಮ ಮಹಿಳಾ ಶಾಸಕಿಯಾಗಿ ಅವರು ಹೊಸ ಇತಿಹಾಸ ನಿರ್ಮಿಸಿದರು. ಶಾಸಕಿಯಾಗಿದ್ದ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ರಾಜಕಾರಣಕ್ಕೆ ಬರುವ ಮೊದಲೇ ‘ಅಂಜಲಿ ತಾಯಿ ಫೌಂಡೇಶನ್’ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿದ್ದ ಇವರು, ಬಾಲ ಭವನದ ಅಧ್ಯಕ್ಷೆಯಾಗಿ, ಕೆಪಿಸಿಸಿ ಸದಸ್ಯೆಯಾಗಿ ಹಾಗೂ ಸಂಸದೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಎಐಸಿಸಿ ಕಾರ್ಯದರ್ಶಿಯಾಗಿ ಗೋವಾ ಸೇರಿದಂತೆ ವಿವಿಧ ರಾಜ್ಯಗಳ ಉಸ್ತುವಾರಿ ವಹಿಸಿಕೊಂಡಿರುವ ಇವರು, ಕೇರಳ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಜವಾಬ್ದಾರಿಯನ್ನೂ ಹೊತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಸಂಘಟನಾ ಚತುರತೆಯಿಂದ ಗಮನ ಸೆಳೆದಿದ್ದಾರೆ.
ಅದೇ ರೀತಿ, ಖಾನಾಪುರ ತಾಲೂಕಿನ ಹಲಗಾ ಗ್ರಾಮ ಪಂಚಾಯಿತಿಯ ಸದಸ್ಯೆಯಾಗಿ, ಉಪಾಧ್ಯಕ್ಷೆಯಾಗಿ ಹಾಗೂ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುವ ಸಾವಿತ್ರಿ ರಮೇಶ್ ಮಾದಾರ ಅವರ ಸಾಧನೆ ಗಮನಾರ್ಹ. ಪ್ರಸ್ತುತ ಖಾನಾಪುರ ಬ್ಲಾಕ್ ಕಾಂಗ್ರೆಸ್ ಅರ್ಬನ್ ಅಧ್ಯಕ್ಷೆಯಾಗಿ, ನವ ಕರ್ನಾಟಕ ರೈತ ಸಂಘದ ಅಧ್ಯಕ್ಷೆಯಾಗಿ ಹಾಗೂ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಸದಸ್ಯೆಯಾಗಿ ದೀನದಲಿತರ ಪರ ಧ್ವನಿ ಎತ್ತುತ್ತಾ ಮಹಿಳಾ ಸಬಲೀಕರಣಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ಆಡಳಿತ ಮತ್ತು ಅರಣ್ಯ ಇಲಾಖೆಯಲ್ಲಿ ಮಹಿಳಾ ಶಕ್ತಿ: ಖಾನಾಪುರ ಉಪ ವಿಭಾಗದ ಎಸಿಎಫ್ (ACF) ಆಗಿ ಸುನೀತಾ ನಿಂಬರಗಿ ಅವರು ಕಳೆದ ಎರಡು ವರ್ಷಗಳಿಂದ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ನಂದಗಡದ ಉಪ ವಲಯ ಅರಣ್ಯಾಧಿಕಾರಿ ಮಾಧುರಿ ದಳವಾಯಿ ಹಾಗೂ ಖಾನಾಪುರ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಗಸ್ತು ಅರಣ್ಯ ಪಾಲಕರಾಗಿ ಕಳೆದ ಆರು ವರ್ಷಗಳಿಂದ ರತ್ನಾ ಶಿವಪ್ಪ ಹಂಚಿನಮನಿ ಅವರು ಅರಣ್ಯ ಸಂರಕ್ಷಣೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ಸಮಾಜ ಸೇವೆಯಲ್ಲಿ ಮುಂಚೂಣಿ: ಪಟ್ಟಣ ಪಂಚಾಯಿತಿಯ ನಾಮನಿರ್ದೇಶಿತ ಸದಸ್ಯೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷೆಯಾಗಿರುವ ರೂಪಾ ನಾಯಿಕ ಅವರು ಕಳೆದ ಹಲವು ವರ್ಷಗಳಿಂದ ಬಡವರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಡಾ. ಅಂಬೇಡ್ಕರ್ ಬ್ರಿಗೇಡ್ ಮಹಿಳಾ ಘಟಕದ ಅಧ್ಯಕ್ಷೆಯಾಗಿಯೂ ಮಹಿಳೆಯರ ಏಳಿಗೆಗಾಗಿ ಇವರು ಶ್ರಮಿಸುತ್ತಿದ್ದಾರೆ.
ಇನ್ನು ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ (VA) ಕಾರ್ಯನಿರ್ವಹಿಸುತ್ತಿರುವ ಶಕುಂತಲಾ ಎ. ಅವರು ಕಳೆದ ಆರು ವರ್ಷಗಳಿಂದ ಅವರೊಳ್ಳಿ-ಬಿಳಕಿ, ಕಡತನಬಾಗೇವಾಡಿ, ಮುಗಳಿಹಾಳ ಹಾಗೂ ಬಂಕಿ-ಬಸರೀಕಟ್ಟಿ ಗ್ರಾಮಗಳಲ್ಲಿ ರೈತರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಒಬ್ಬ ಮಹಿಳಾ ಅಧಿಕಾರಿಯಾಗಿ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಅವರು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ.
ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಪುರುಷರಿಗೆ ಸಮನಾಗಿ, ಇನ್ನು ಕೆಲವು ಕಡೆ ಪುರುಷರಿಗಿಂತಲೂ ಮಿಗಿಲಾಗಿ ಸಾಧನೆ ಮಾಡುತ್ತಿರುವ ಖಾನಾಪುರದ ಈ ಎಲ್ಲ ಮಹಿಳಾಮಣಿಗಳಿಗೆ ‘ಮಹಿಳಾ ದಿನಾಚರಣೆ’ಯ ಶುಭಾಶಯಗಳು ಹಾಗೂ ಒಂದು ಸಲಾಮ್.
