ಸವಾಲು ಸ್ವೀಕರಿಸಿ ದಾವಣಗೆರೆಗೆ ಬಂದ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಬಿಜೆಪಿ ಕಾರ್ಯಕರ್ತರು ಪೊರಕೆ, ಶೂ ಹಿಡಿದು ವಿರೋಧ ವ್ಯಕ್ತಪಡಿಸಿದರು. ಕಮಲ ಪಾಳಯದ ಕೋಟೆಯಲ್ಲೇ ಶಾಸಕರು ತೊಡೆ ತಟ್ಟಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ನಡೆದಿದೆ.
ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ದಿನ ಬಿಜೆಪಿ ನಾಯಕರ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ತೊಡೆ ತಟ್ಟಿ ಕೆಲ ಹೇಳಿಕೆ ನೀಡಿದ್ದರು. ಆ ಮಾತುಗಳು ಬಿಜೆಪಿಯವರನ್ನು ಕೆರೆಳಿಸಿತ್ತಲ್ಲದೇ, ತಾಕತ್ತು ಇದ್ದರೆ ದಾವಣಗೆರೆ ಬರುವಂತೆ ಬಿಜೆಪಿ ನಾಯಕ ಬಿ ಜಿ ಅಜಯ್ ಕುಮಾರ್ ಸವಾಲು ಹಾಕಿದ್ದರು. ಆ ಸವಾಲನ್ನು ಸ್ವೀಕರಿಸಿದ ಶಾಸಕ ಪ್ರದೀಪ್ ಈಶ್ವರ್ ಇಂದು ದಾವಣಗೆರೆಗೆ ಆಗಮಿಸಿದರು. ಈ ವೇಳೆ ಹೈಡ್ರಾಮವೇ ನಡೆದಿದೆ.
ಪ್ರದೀಪ್ ಈಶ್ವರ್ ಬಿಜೆಪಿ ಕಚೇರಿ ಬಳಿ ಆಗಮಿಸಿದ್ದೇ ತಡ ಬಿಜೆಪಿ ಕಾರ್ಯಕರ್ತರು ಪೊರಕೆ ಹಿಡಿದು ವಿರೋಧ ವ್ಯಕ್ತಪಡಿಸಿದರು. ಚಪ್ಪಲಿ, ಶೂ ಪ್ರದರ್ಶನ ಮಾಡಿದರು. ಬಿಜೆಪಿ ನಾಯಕ ಬಿ ಜಿ ಅಜಯ್ ಕುಮಾರ್ರನ್ನು ಹೆಗಲ ಮೇಲೆ ಹೊತ್ತ ಕಾರ್ಯಕರ್ತರು ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆ ಕೂಗಿದರು. ಇತ್ತ ಶಾಸಕ ಪ್ರದೀಪ್ ಈಶ್ವರ್ ಕಾರಿನ ಮೇಲೆ ನಿಂತು ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಸವಾಲು ಸ್ವೀಕರಿಸಿ ದಾವಣಗೆರೆಗೆ ಬಂದಿದ್ದೇನೆ ಎಂದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಎಸ್ಪಿ ಪರಮೇಶ್ವರ ಹೆಗಡೆ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನಗೊಳಿಸಿ ಪ್ರದೀಪ್ ಕಾರನ್ನು ಮುಂದೆ ಕಳುಹಿಸಿದರು. ಈ ವೇಳೆ, ನೂಕಾಟ ತಳ್ಳಾಟ ಏರ್ಪಟ್ಟಿತು. ಸಿಆರ್ಪಿಎಫ್ ಯೋಧರು, ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ವಿಚಾರವಾಗಿ ಮಾತನಾಡಿದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ನಾಯಕರು ಅಲ್ಪಸಂಖ್ಯಾಂತರ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಅದ್ಯಾವುದೋ ದೇಶಕ್ಕೆ ಹೋಗಿ ಎಂದರು. ಅವರ ಧರ್ಮದ ಮೇಲೆ ಪ್ರಶ್ನೆ ಮಾಡಿದರು. ಅವರ ಅಂಗಡಿಗಳಲ್ಲಿ ಏನೂ ತೆಗೆದುಕೊಳ್ಳಬಾರದು ಎಂದರಲ್ಲದೇ, ಹಲಾಲ್ ಹಿಜಾಬ್ ಬಗ್ಗೆ ಮಾತನಾಡಿದರು. ಮುಸ್ಲಿಮರ ಶಿಕ್ಷಣಕ್ಕಾಗಿ ಒತ್ತು ನೀಡಲು ಇಂತಿಷ್ಟು ಹಣ ಇಟ್ಟಿದಕ್ಕಾಗಿ ಬಿಜೆಪಿಯವರು ಇದು ಮುಸ್ಲಿಂ ಬಜೆಟ್ ಎಂದರು.
ದಾವಣಗೆರೆಗೆ ಬಾ ಎಂದರು ಬಿಜೆಪಿ ಪಾರ್ಟಿ ಆಫೀಸ್ ಕಡೆ ಬಂದೆ. ಆದರೇ ಅವರು ಏನೂ ಮಾಡಲು ಆಗಲಿಲ್ಲ ಎಂದು ಪ್ರದೀಪ್ ಸನ್ನೆ ಮಾಡಿ ಹೇಳಿದರು. ಇದು ಬಿಜೆಪಿಯ ಸಂಪ್ರದಾಯ. ನಾನು ಒಬ್ಬ ಒಬಿಸಿ ಹುಡುಗ, ನನಗೆ ಚಪ್ಪಲಿ ತೋರಿಸಿದರು. ನನಗೆ ಅಲ್ಲ ನೀವು ಚಪ್ಪಲಿ ತೋರಿಸಿದ್ದು ಅಹಿಂದನಿಗೆ. ನೀವು ಪೊರಕೆ ತೋರಿಸಿದ್ದು, ನನಗಲ್ಲ ಅಹಿಂದನಿಗೆ. ದಾವಣಗೆರೆ ದಕ್ಷಿಣದಲ್ಲಿ ಅಹಿಂದ ತಾಕತ್ತು ತೋರಿಸುತ್ತೇವೆ. ಸಮರ್ಥ್ನನ್ನು ಗೆಲ್ಲಿಸುತ್ತೇವೆ ಎಂದು ಶಾಸಕರು ಸವಾಲೆಸೆದರು.
