State

ತುಮಕೂರು: ಅಭಿವೃದ್ಧಿ ಕಾಮಗಾರಿಗಳಿಗೆ ವೇಗ, ನೀರಿನ ಸಮಸ್ಯೆ ನಿವಾರಣೆಗೆ ಭರವಸೆ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್

Share

ತುಮಕೂರು ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಗೃಹ ಸಚಿವ ಜಿ. ಪರಮೇಶ್ವರ್ ಮಹತ್ವದ ಮಾಹಿತಿ ನೀಡಿದ್ದಾರೆ. ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಅವರು, ಜಿಲ್ಲೆಯಲ್ಲಿನ ನೀರಿನ ಸಮಸ್ಯೆ, ಗ್ಯಾಸ್ ಪೂರೈಕೆ, ವಡೇರಹಳ್ಳಿ ಬಫರ್ ಡ್ಯಾಂ ನಿರ್ಮಾಣ ಹಾಗೂ ಒಳಮೀಸಲಾತಿ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಸಚಿವ ಜಿ. ಪರಮೇಶ್ವರ್, ಮಠದೊಂದಿಗಿನ ತಮ್ಮ ಕುಟುಂಬದ ಅವಿನಾಭಾವ ಸಂಬಂಧವನ್ನು ಸ್ಮರಿಸಿದರು. ಇನ್ನು ಜಿಲ್ಲೆಯ ಪ್ರಮುಖ ಬೇಡಿಕೆಯಾದ ವಡೇರಹಳ್ಳಿ ಬಫರ್ ಡ್ಯಾಂ ಬಗ್ಗೆ ಮಾತನಾಡಿದ ಅವರು, “ಬಿಜೆಪಿ ಸರ್ಕಾರ ಬದಲಿಸಿದ್ದ ಮೂಲ ಯೋಜನೆಯಂತೆ, ಇದೀಗ 5 ಸಾವಿರ ಎಕರೆಯಲ್ಲಿ ಬಫರ್ ಡ್ಯಾಂ ನಿರ್ಮಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ. ರೈತರ ವಿರೋಧವನ್ನು ಮಾತುಕತೆ ಮೂಲಕ ಬಗೆಹರಿಸಿ, ಒಂದೂವರೆ ಟಿಎಂಸಿ ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು” ಎಂದರು.

ಜಿಲ್ಲೆಯಲ್ಲಿ ಗ್ಯಾಸ್ ಅಥವಾ ನೀರಿನ ತೀವ್ರ ಸಮಸ್ಯೆ ಸದ್ಯಕ್ಕಿಲ್ಲವಾದರೂ, ಮುಂಬರುವ ಬೇಸಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಬಿಡಲು ಕೋರಲಾಗಿದೆ ಎಂದರು. ಒಳಮೀಸಲಾತಿ ವಿಚಾರವಾಗಿ ಮಾತನಾಡಿದ ಸಚಿವರು, “ಮಾರ್ಚ್ 28ರಂದು ಸಿಎಂ ವಿಶೇಷ ಸಭೆ ಕರೆದಿದ್ದು, ಅಂದು ಅಂತಿಮ ತೀರ್ಮಾನ ಹೊರಬೀಳಲಿದೆ. ಬಳಿಕ ಪೊಲೀಸ್ ಇಲಾಖೆಯ 8 ಸಾವಿರ ಹುದ್ದೆಗಳು ಸೇರಿದಂತೆ ನೇಮಕಾತಿ ಪ್ರಕ್ರಿಯೆ ಚುರುಕುಗೊಳ್ಳಲಿದೆ” ಎಂದು ತಿಳಿಸಿದರು. ಅಕ್ಕಿರಾಂಪುರ ಹಾಸ್ಟೆಲ್ ಸಮಸ್ಯೆಯನ್ನು ಶೀಘ್ರವೇ ಖುದ್ದಾಗಿ ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದರು.

Tags:

error: Content is protected !!