Bagalkot

ಬಾಗಲಕೋಟೆಯಲ್ಲಿ ಶುರುವಾಯ್ತು ಹೋಳಿ ಹಬ್ಬದ ಅಬ್ಬರ: ಬೀಳಗಿಯಲ್ಲಿ ರೇನ್ ಡ್ಯಾನ್ಸ್ ಧಮಾಕಾ, ನಾಳೆಯಿಂದ ಬಣ್ಣದ ಬಂಡಿ ಮೆರವಣಿಗೆ

Share

ಬಣ್ಣಗಳ ಹಬ್ಬ ಹೋಳಿ ಅಂದ್ರೆ ಬಾಗಲಕೋಟೆ ಜಿಲ್ಲೆಯಲ್ಲಿ ಅದೊಂಥರಾ ಸಂಭ್ರಮ. ಇಂದು ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಹೋಳಿ ಹಬ್ಬಕ್ಕೆ ಅದ್ಧೂರಿ ಚಾಲನೆ ಸಿಕ್ಕಿದ್ದು, ರೇನ್ ಡ್ಯಾನ್ಸ್ ಮೂಲಕ ಯುವಜನತೆ ಸಂಭ್ರಮಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಮೊದಲ ದಿನವೇ ಹೋಳಿ ಹಬ್ಬದ ರಂಗು ಕಳೆಗಟ್ಟಿದೆ. ಜಿಲ್ಲೆಯ ಬೀಳಗಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ವಿಶೇಷವಾಗಿ ರೇನ್ ಟೆಂಟ್ ಅಳವಡಿಸಲಾಗಿದ್ದು, ಡಿಜೆ ಸದ್ದಿಗೆ ಯುವಕ-ಯುವತಿಯರು ಭರ್ಜರಿಯಾಗಿ ಹೆಜ್ಜೆ ಹಾಕಿದರು. ಸ್ಟೇಜ್ ಮೇಲೆ ಯುವತಿಯರು ಹಾಡು ಮತ್ತು ಡ್ಯಾನ್ಸ್ ಮೂಲಕ ಎಲ್ಲರನ್ನು ರಂಜಿಸಿದರೆ, ಬೀಳಗಿ ಬಾಯ್ಸ್ ಬಣ್ಣದೋಕುಳಿಯಲ್ಲಿ ಮಿಂದೆದ್ದು ಸಖತ್ ಸ್ಟೆಪ್ಸ್ ಹಾಕುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.

ಇನ್ನು ಬಾಗಲಕೋಟೆ ನಗರದಲ್ಲಿ ನಾಳೆಯಿಂದ ಅಧಿಕೃತವಾಗಿ ಹೋಳಿ ಸೆಲೆಬ್ರೇಷನ್ ಆರಂಭವಾಗಲಿದೆ. ಬಾಗಲಕೋಟೆ ಹಳೇ ನಗರ, ವಿದ್ಯಾಗಿರಿ ಹಾಗೂ ನವನಗರದಾದ್ಯಂತ ಸತತ ಮೂರು ದಿನಗಳ ಕಾಲ ರೇನ್ ಡ್ಯಾನ್ಸ್ ಆಯೋಜಿಸಲಾಗಿದೆ. ಇದರ ಜೊತೆಗೆ ಬಾಗಲಕೋಟೆಯ ಐತಿಹಾಸಿಕ ಬಣ್ಣದ ಬಂಡಿ ಮೆರವಣಿಗೆ ಮತ್ತು ಸೋಗಿನ ಬಂಡಿ ಶೋ ಜಿಲ್ಲೆಯ ಪ್ರಮುಖ ಆಕರ್ಷಣೆಯಾಗಲಿದೆ. ಸಾವಿರಾರು ಪ್ರವಾಸಿಗರು ಮತ್ತು ಸ್ಥಳೀಯರು ಈ ಬಣ್ಣದಾಟದಲ್ಲಿ ಭಾಗವಹಿಸಲಿದ್ದು, ಇಡೀ ನಗರವೇ ಬಣ್ಣದ ಲೋಕವಾಗಿ ಮಾರ್ಪಡಲಿದೆ.

Tags:

error: Content is protected !!