ಬೆಳಗಾವಿಯಲ್ಲಿ ಇಂದು ರಂಗಪಂಚಮಿಯ ಸಡಗರ ಮುಗಿಲು ಮುಟ್ಟಿದೆ. ಶಹಾಪುರ, ಖಾಸಬಾಗ ಹಾಗೂ ವಡಗಾಂವ್ ಭಾಗದ ಗಲ್ಲಿ ಗಲ್ಲಿಗಳಲ್ಲಿ ಯುವಕ-ಯುವತಿಯರು ಬಣ್ಣದ ಓಕುಳಿಯಲ್ಲಿ ಮಿಂದೆದ್ದಿದ್ದು, ಅಣುಕು ಶವಯಾತ್ರೆ ಹಾಗೂ ರೇನ್ ಡ್ಯಾನ್ಸ್ ಮೂಲಕ ಹೋಳಿ ಹಬ್ಬಕ್ಕೆ ವಿಶೇಷ ಮೆರುಗು ನೀಡಿದ್ದಾರೆ.


ಕುಂದಾನಗರಿಯ ಶಹಾಪುರದಲ್ಲಿ ಇಂದು ಬಣ್ಣದ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುವಕರು, ಯುವತಿಯರು ಹಾಗೂ ಪುಟಾಣಿಗಳು ಬಣ್ಣದ ನೀರು ಎರಚುತ್ತಾ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಡೀಜೆ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ರೇನ್ ಡ್ಯಾನ್ಸ್‌ನಲ್ಲಿ ಮಿಂದೇಳುತ್ತಾ ಯುವ ಸಮೂಹ ಸಂಭ್ರಮಿಸಿತು. ವಿವಿಧ ವಿಚಿತ್ರ ವೇಷಭೂಷಣಗಳನ್ನು ತೊಟ್ಟ ಯುವಕರು ಎಲ್ಲರ ಗಮನ ಸೆಳೆದರೆ, ಸುಡು ಬಿಸಿಲಿನಲ್ಲೂ ಬಣ್ಣಗಳ ಲೋಕದಲ್ಲಿ ಎಲ್ಲರೂ ತಲ್ಲೀನರಾಗಿದ್ದರು.

ಶಹಾಪುರದ ಹೋಳಿ ಆಚರಣೆಯ ಪ್ರಮುಖ ಆಕರ್ಷಣೆಯಾದ ‘ಅಣುಕು ಶವಯಾತ್ರೆ’ ಈ ಬಾರಿಯೂ ಸಾವಿರಾರು ಜನರನ್ನು ಆಕರ್ಷಿಸಿತು. ಶಹಾಪುರ ಸೇರಿದಂತೆ ಖಾಸಬಾಗ ಮತ್ತು ವಡಗಾಂವನ ಗಲ್ಲಿಗಳಲ್ಲಿ ಜನರು ತಂಡೋಪತಂಡವಾಗಿ ಬಂದು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ನಗರ ಸೇವಕ ರವಿ ಸಾಳುಂಕೆ ಅವರು ಈ ಸಂಭ್ರಮದಲ್ಲಿ ಪಾಲ್ಗೊಂಡು ಕ್ರೀಡಾಸ್ಫೂರ್ತಿಯನ್ನು ಮೆರೆದರು.

ಹಬ್ಬದ ಆಚರಣೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರು ಸ್ವತಃ ಸ್ಥಳಕ್ಕೆ ಭೇಟಿ ನೀಡಿ, ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲಿಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಆಯುಕ್ತರು ಸೂಚನೆ ನೀಡಿದರು. ಇಡೀ ದಿನ ಬೆಳಗಾವಿ ನಗರ ಬಣ್ಣದ ಲೋಕದಲ್ಲಿ ಮಿಂದೆದ್ದು, ಸೌಹಾರ್ದತೆಯ ಪ್ರತೀಕವಾಗಿ ರಂಗಪಂಚಮಿ ಆಚರಿಸಲಾಯಿತು.


