Vijaypura

ಪಿಯುಸಿ ಮೌಲ್ಯಮಾಪನ ಸ್ಥಗಿತಗೊಳಿಸಿ ಪ್ರತಿಭಟನೆಗಿಳಿದ ಹಿಂದಿ ಶಿಕ್ಷಕರು; ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಜೊತೆಗೆ ಖಂಡಿಸಿ ಎಚ್ಚರಿಕೆ

Share

ವಿದ್ಯಾರ್ಥಿಗಳಿಗೆ ಹಿಂದಿ ಪಾಸ್‌ ಕಡ್ಡಾಯ ಮಾಡದಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಬೆನ್ನಲ್ಲೇ ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಚಿಂತನೆ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಮಧು ಬಂಗಾರಪ್ಪ ಹೇಳಿದ್ದರು.‌ ನಿನ್ನೆಯಷ್ಟೇ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, SSLC ಪರೀಕ್ಷೆಯ ಅಂಕಗಳನ್ನು 625ಕ್ಕೆ ಬದಲಿಗೆ 525 ಅಂಕಗಳಿಗೆ ಇಳಿಕೆ ಮಾಡಲಾಗಿದೆ. ಹಿಂದಿ ಸೇರಿ ತೃತೀಯ ಭಾಷೆಗಳ ಅಂಕಗಳಿಗೆ ಕೊಕ್ ನೀಡಲಾಗಿದ್ದು ಹಿಂದಿನ‌ ವರ್ಷಗಳಂತೆ ಅವರು 100 ಅಂಕಗಳಿಗೆ ಪರೀಕ್ಷೆ ಬರೆಯಲಿದ್ದಾರೆ.

ಅಂಕಪಟ್ಟಿಯಲ್ಲಿ ಗ್ರೇಡ್ ಅಂತ ನಮೂದಿಸಲಾಗುತ್ತದೆ ಎಂದು ಹೇಳಿದ್ದರು. ಆದ್ರೆ ಈ ನಿರ್ಧಾರಕ್ಕೆ ಪರ ವಿರೋಧ ಚರ್ಚೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪಿಯುಸಿ ಪರೀಕ್ಷಾ ಪತ್ರಿಕಾ ಮೌಲ್ಯಮಾಪನ ಮಾಡುವ ಉಪನ್ಯಾಸಕರು ಮೌಲ್ಯಮಾಪನ ಸ್ಥಗಿತಗೊಳಿಸಿ ಸರ್ಕಾರದ ವಿರುದ್ಧ ಹರಿಹಾಯ್ದು ಪ್ರತಿಭಟನೆ ನಡೆಸಿದರು. ವಿಜಯಪುರ, ಬಾಗಲಕೋಟ, ಯಾದಗಿರಿ ಮತ್ತಿತರ ಕಡೆಗಳಿಂದ ಆಗಮಿಸಿದ್ದ ಹಿಂದಿ ಉಪನ್ಯಾಸಕರು ಸರ್ಕಾರದ ವಿರುದ್ದದ ಆಕ್ರೋಶ ಹೊರಹಾಕಿದರು‌. ತ್ರಿಭಾಷಾ ನೀತಿ ಹೊಂದಿರುವ ಕರ್ನಾಟಕದಲ್ಲಿ ಯಾವುದೇ ಪೂರ್ವಾಪರ ಚರ್ಚೆ, ಶಿಕ್ಷಣ ತಜ್ಞರ ಸಲಹೆ, ಪ್ರತಿಪಕ್ಷಗಳ ನಿಲುವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ಉಪನ್ಯಾಸಕರು, ಶಿಕ್ಷಕರು ವಾಗ್ದಾಳಿ ನಡೆಸಿದರು.

Tags:

error: Content is protected !!