ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್ ಯುದ್ಧದ ಎಫೆಕ್ಟ್ ಈಗ ಬೆಳಗಾವಿ ಜಿಲ್ಲೆಯ ಮೇಲೂ ತೀವ್ರವಾಗಿ ಬೀರಿದೆ. ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳಿಗಾಗಿ ಜನರು ಗಂಟೆಗಟ್ಟಲೆ ರಸ್ತೆಯಲ್ಲಿ ನಿಲ್ಲುವಂತಾಗಿದ್ದು, ಇಡೀ ಜಿಲ್ಲೆಯಲ್ಲಿ ಇಂಧನ ಅಭಾವದ ಆತಂಕ ಮನೆಮಾಡಿದೆ.

ಬೆಳಗಾವಿ ತಾಲೂಕಿನ ಕಡೋಲಿ ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಗೃಹ ಬಳಕೆ ಗ್ಯಾಸ್‌ಗಾಗಿ ಜನರು ಮುಂಜಾನೆಯಿಂದಲೇ ಏಜೆನ್ಸಿಗಳ ಮುಂದೆ ಜಮಾಯಿಸುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಪಡೆಯಲು ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಇತ್ತ ಬೆಳಗಾವಿ ನಗರ ಪ್ರದೇಶದಲ್ಲಿ ಹೋಟೆಲ್ ಉದ್ಯಮಿಗಳು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಸಿಗದೆ ಕಂಗಾಲಾಗಿದ್ದಾರೆ. ಯುದ್ಧದ ಹಿನ್ನೆಲೆಯಲ್ಲಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಜನಸಾಮಾನ್ಯರ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಗ್ಯಾಸ್ ಅಭಾವ ತೀರದಿದ್ದರೆ ಹೋಟೆಲ್ ಉದ್ಯಮ ಮತ್ತು ಮನೆಗಳ ಅಡುಗೆಗೆ ಭಾರೀ ಹೊಡೆತ ಬೀಳುವ ಆತಂಕ ಎದುರಾಗಿದೆ.
