ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮಹತ್ವದ ಸಭೆ ಜರುಗಿತು. ಸಭೆಯಲ್ಲಿ ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳನ್ನು ಕೂಡಲೇ ತೆರವುಗೊಳಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.


ಖಾನಾಪುರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಪ್ರಾಧಿಕಾರದ ಸದಸ್ಯ ಇಸಾಕ್ ಖಾನ್ ಪಠಾಣ್, ಖಾನಾಪುರ ಪಟ್ಟಣದ ಬಜಾರ್ ಪೇಟೆ, ಬಾಹೇರಗಲ್ಲಿ, ನಿಂಗಾಪೂರಗಲ್ಲಿ ಹಾಗೂ ದುರ್ಗಾನಗರದ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಜರ್ಜರಿತವಾಗಿದ್ದು, ಬೀಳುವ ಸ್ಥಿತಿಯಲ್ಲಿವೆ ಎಂದು ಆತಂಕ ವ್ಯಕ್ತಪಡಿಸಿದರು. ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಇವುಗಳನ್ನು ಪರಿಶೀಲಿಸಿ ನೂತನ ಕಂಬ ಅಳವಡಿಸಬೇಕೆಂದು ಹೆಸ್ಕಾಂ ಅಧಿಕಾರಿ ಎಸ್.ಸಿ. ಅಂಗಡಿ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಐದೂ ಗ್ಯಾರಂಟಿ ಯೋಜನೆಗಳ ಪ್ರಗತಿಯ ಕುರಿತು ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಸವಿಸ್ತಾರವಾದ ಮಾಹಿತಿ ಪಡೆದರು. ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಲಾಭ ತಲುಪಿಸುವಲ್ಲಿ ಯಾವುದೇ ವಿಳಂಬವಾಗದಂತೆ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಪ್ರಾಧಿಕಾರದ ಸದಸ್ಯರಾದ ಬಾಬು ಹತ್ತರವಾಡ, ಯೂಸೂಫ್ ಹಾರಗಿ, ದೀಪಾ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪಂಚ ಗ್ಯಾರಂಟಿ ಯೋಜನೆಯ ಕಾರ್ಯದರ್ಶಿ ರಮೇಶ್ ಮೇತ್ರಿ ಅವರು ಸರ್ಕಾರದ ಆದೇಶಗಳನ್ನು ವಿವರಿಸಿ ಸಭೆಯನ್ನು ನಡೆಸಿಕೊಟ್ಟರು.
