ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಕನ್ನಡಿಗರ ಸ್ಥಿತಿ ಗಂಭೀರವಾಗಿದೆಯೇ? ಎಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಸಾಬಣ್ಣ ತಳವಾರ ಅವರು ಜತ್, ಸೊಲ್ಲಾಪುರ ಮತ್ತು ಅಕ್ಕಲಕೋಟೆಯ ಕನ್ನಡಿಗರ ಪರವಾಗಿ ಧ್ವನಿ ಎತ್ತಿದ್ದು, ಗಡಿಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗಡಿನಾಡು ಮತ್ತು ಹೊರನಾಡು ಕನ್ನಡಿಗರ ಕುರಿತು ಧ್ವನಿ ಎತ್ತಿದ ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಅವರು, ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲ್ಬುರ್ಗಿ ಮತ್ತು ವಿಜಯಪುರಯಲ್ಲಿರುವ ಹೊರನಾಡು ಕನ್ನಡಿಗರು ಮತ್ತು ಜತ್ ಸಂಸ್ಥಾನದ ಕನ್ನಡಿಗರ ಬಗ್ಗೆ ಧ್ವನಿ ಎತ್ತಿದರು. 1956ರ ಭಾಷಾವಾರು ಪ್ರ್ಯಾಂತ ರಚನೆಯ ವೇಳೆ ವಿಜಯಪುರ ಜಿಲ್ಲೆಗೆ ಜತ್ ಸಂಸ್ಥಾನ ಸೇರ್ಪಡೆಯಾಗಬೇಕಿತ್ತು. ಆದರೇ, ಈಗ ಮಹಾರಾಷ್ಟ್ರದಲ್ಲಿ ಸೇರಿದೆ. ಕರ್ನಾಟಕದಲ್ಲಿರುವ ಮರಾಠಿಗರ ಬಗ್ಗೆ ಕರ್ನಾಟಕ ಸರ್ಕಾರ ಕಾಳಜಿ ತೋರಿಸುತ್ತದೆ. ಆದರೇ, ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಬಗ್ಗೆ ಮಹಾರಾಷ್ಟ್ರ ಸರ್ಕಾರ ಕಾಳಜಿ ತೋರುತ್ತಿಲ್ಲ. ಈ ಕನ್ನಡಿಗರ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನಿಸಿದರು.
ಇದಕ್ಕೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಅವರು ಈ ಕುರಿತು ಸರ್ಕಾರ ಅಗತ್ಯ ಕ್ರಮವನ್ನು ಕೈಗೊಳ್ಳಲು ಬದ್ಧವಾಗಿದೆ ಎಂದರು. ಮತ್ತೇ ಮಾತು ಮುಂದುವರೆಸಿದ ಸಾಬಣ್ಣ ತಳವಾರ ಅವರು ಜತ್ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕ ಮಾಡಬೇಕು. ಶೇ. 5 ರಷ್ಟು ಮೀಸಲಾತಿ ಅನುಷ್ಠಾನಗೊಳಿಸಬೇಕು. ಗಡಿಭಾಗದ ಜತ್, ಅಕ್ಕಲಕೋಟ್, ಸೊಲ್ಲಾಪುರದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಿಶೇಷ ಶಿಷ್ಯವೇತನವನ್ನು ನೀಡಬೇಕೆಂದರು. ಇದಕ್ಕೆ ಸಚಿವರು ಇದೇ ವಾರದಲ್ಲಿ ಗಡಿ ಪ್ರಾಧಿಕಾರದ ಸಚಿವರಸಹಯೋಗದಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
