ಕುಂದಾನಗರಿ ಬೆಳಗಾವಿಯ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಕ್ರಿಕೆಟ್ ಮಾದರಿಯಲ್ಲೇ ಈಗ ಗೋಲ್ಫ್ ಆಟದಲ್ಲೂ ಲೀಗ್ ಹಬ್ಬ ಶುರುವಾಗಿದ್ದು, ‘ಆಲಿವ್ ಗ್ರೀನ್ಸ್ ಗೋಲ್ಫ್ ಲೀಗ್’ (OGGL) ಚಾಲನೆ ಪಡೆದುಕೊಂಡಿದೆ. ಪ್ರತಿಷ್ಠಿತ ಆಲಿವ್ ಗ್ರೀನ್ಸ್ ಗೋಲ್ಫ್ ಕೋರ್ಸ್ನಲ್ಲಿ ಆರಂಭವಾಗಿರುವ ಈ ಕ್ರೀಡಾಕೂಟವು ಕ್ರೀಡಾಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.

ಫ್ರಾಂಚೈಸಿ ಮಾದರಿಯಲ್ಲಿ ನಡೆಯುತ್ತಿರುವ ಈ ವಿಶೇಷ ಲೀಗ್ನಲ್ಲಿ ಒಟ್ಟು ಎಂಟು ತಂಡಗಳು ಕಣಕ್ಕಿಳಿದಿವೆ. ಕಳೆದ ಮಾರ್ಚ್ 13 ರಂದು ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ತಂಡದ ಮಾಲೀಕರು ಅತ್ಯಂತ ಯೋಜಿತವಾಗಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ಪಂದ್ಯಾವಳಿಯ ಕುತೂಹಲವನ್ನು ಹೆಚ್ಚಿಸಿದ್ದಾರೆ. ಮಾರ್ಚ್ 21 ರಿಂದ ಅಧಿಕೃತವಾಗಿ ಪಂದ್ಯಗಳು ಆರಂಭವಾಗಿದ್ದು, ಮಿಹಿರ್ ಪೋತ್ದಾರ್ XI, ರಾಯಲ್ ಕಿಂಗ್ಸ್, ಕ್ಲೌಡ್ 9 ಟೈಗರ್ಸ್ ಮತ್ತು ಎಸ್ಬಿಜಿ ವಾರಿಯರ್ಸ್ ಸೇರಿದಂತೆ ಪ್ರಬಲ ತಂಡಗಳ ನಡುವೆ ಪ್ರಶಸ್ತಿಗಾಗಿ ಜಿದ್ದಾಜಿದ್ದಿ ಶುರುವಾಗಿದೆ.ಬೆಳಗಾವಿಯಲ್ಲಿ ಗೋಲ್ಫ್ ಕ್ರೀಡೆಯನ್ನು ಜನಪ್ರಿಯಗೊಳಿಸುವುದು ಮತ್ತು ಉದಯೋನ್ಮುಖ ಆಟಗಾರರಿಗೆ ರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸುವುದು ಈ ಲೀಗ್ನ ಮುಖ್ಯ ಉದ್ದೇಶವಾಗಿದೆ. ಈ ವೇಳೆ ಮಾತನಾಡಿದ ಮಿಹೀರ್ ಪೋತದಾರ ಅವರು ಆಯೋಜಕರ ಕಾರ್ಯವನ್ನು ಪ್ರಶಂಸಿಸಿದರು. ಅಲ್ಲದೇ ತಮ್ಮ ತಂಡಕ್ಕೆ ಉತ್ತಮ ಕ್ರೀಡಾಪಟುಗಳು ದೊರೆತಿದ್ದು, ಗೆಲ್ಲುವ ನಿಟ್ಟಿನಲ್ಲಿ ಸ್ಪರ್ಧೆಯನ್ನು ನಡೆಸುವುದಾಗಿ ತಿಳಿಸಿದರು.

ಡೈನಾಮಿಕ್ಸ್ ಸಿಲ್ವರ್ ಬಿಲ್ ಸ್ಟಾರ್ಸ್, ಯುನಿವರ್ಸಲ್ ಈಗಲ್ಸ್, ಆದಿತ್ಯ ಎಲೈಟ್ ಚಾಂಪಿಯನ್ಸ್ ಮತ್ತು ದಿ ಮಾಸ್ಟರ್ಸ್ ತಂಡಗಳು ಕ್ರೀಡಾಂಗಣದಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸುತ್ತಿವೆ. ಅನುಭವಿ ಆಟಗಾರರ ಜೊತೆಗೆ ಯುವ ಪ್ರತಿಭೆಗಳಿಗೂ ಇಲ್ಲಿ ಆದ್ಯತೆ ನೀಡಲಾಗಿದ್ದು, ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವಿಶಿಷ್ಟ ಲೀಗ್ ಅನ್ನು ಬೆಂಬಲಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
