ಸಾರ್ವಜನಿಕ ಸ್ಥಳಗಳಲ್ಲಿ ಬೈಕ್ ನಿಲ್ಲಿಸುವ ಮುನ್ನ ಎಚ್ಚರ! ಗೋಕಾಕ ಪೊಲೀಸರು ಬೈಕ್ ಕಳ್ಳರ ಜಾಲವೊಂದನ್ನು ಬೇಧಿಸಿದ್ದು, ಕಳ್ಳತನವಾಗಿದ್ದ ಬರೋಬ್ಬರಿ 5 ಲಕ್ಷ ರೂ. ಮೌಲ್ಯದ 15 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.


ಬೆಳಗಾವಿ ಜಿಲ್ಲೆಯ ಗೋಕಾಕ ಪೊಲೀಸರು ಕಾರ್ಯಾಚರಣೆ ನಡೆಸಿ, ಕುಖ್ಯಾತ ಬೈಕ್ ಕಳ್ಳರಾದ ಪರಶುರಾಮ ಹಣಬರಟ್ಟಿ (22) ಮತ್ತು ಲಗಮನ್ನಾ ಮಲ್ಲನ್ನವರ (18) ಎಂಬುವವರನ್ನು ಬಂಧಿಸಿದ್ದಾರೆ. ಫೆಬ್ರವರಿ 5 ರಂದು ಗೋಕಾಕ ನಗರದಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆಯ ಬೆನ್ನುಬಿದ್ದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಆರೋಪಿಗಳು ಗೋಕಾಕ, ಯಮಕನಮರಡಿ, ಹುಕ್ಕೇರಿ ಮತ್ತು ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿರುವುದು ಖಚಿತವಾಗಿದೆ.
ಆರೋಪಿಗಳ ಸುಳಿವು ಪಡೆದ ಪೊಲೀಸರು ದಾಳಿ ನಡೆಸಿ ಬಂಧಿಸುವುದರೊಂದಿಗೆ, ಅವರಿಂದ ಒಟ್ಟು 5 ಲಕ್ಷ ರೂಪಾಯಿ ಮೌಲ್ಯದ 15 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಗೋಕಾಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೀರ್ಘಕಾಲದಿಂದ ಬೈಕ್ ಕಳ್ಳತನ ಮಾಡುತ್ತಿದ್ದ ಈ ಗ್ಯಾಂಗ್‌ನ ಮೂಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಸುರಕ್ಷಿತ ಸ್ಥಳಗಳಲ್ಲಿ ನಿಲ್ಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
