Vijaypura

ವಿಜಯಪುರದಲ್ಲಿ ದಳಪತಿಗಳ ಸಮಾವೇಶ; ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ; ಕಾಂಗ್ರೆಸ್ ಗೂ ಆಘಾತ ನೀಡಿದ ದಳಪತಿಗಳು

Share

ಕಳೆದ ಫೆಬ್ರವರಿ 27 ರಂದು ರಾಜ್ಯ ಜೆಡಿಎಸ್ ಬೆಳ್ಳಿಹಬ್ಬದ ಅಂಗವಾಗಿ ವಿಜಯಪುರ ನಗರದಲ್ಲಿ ಆಯೋಜಿಸಿದ್ದ ಕಿತ್ತೂರು ಕರ್ನಾಟಕ ಭಾಗದ ಜನತಾ ಸಮಾವೇಶ ಮಿತ್ರ ಪಕ್ಷ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಜೊತೆಗೆ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುವ ಸಂದೇಶ ರವಾನಿಸಿದೆ. ಈ ಕುರಿತು ಇಲ್ಲಿದೆ ಒಂದು ವರದಿ…

ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮುಂಬರುವ 2028ರ ಚುನಾವಣೆಯಲ್ಲಿ ಇಂಡಿ, ನಾಗಠಾಣ, ಬಸವನ ಬಾಗೇವಾಡಿ, ದೇವರ ಹಿಪ್ಪರಗಿ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆಗೆ ಈಗಲೇ ಅಣಿಯಾಗಿರುವಂತಿದೆ. ಇನ್ನುಳಿದ ಬಬಲೇಶ್ವರ, ಮುದ್ದೇಬಿಹಾಳ, ಸಿಂದಗಿ ಮತ್ತು ವಿಜಯಪುರವನ್ನು ಬಿಜೆಪಿಗೆ ಬಿಟ್ಟುಕೊಡುವ ಇರಾದೆ ವ್ಯಕ್ತಪಡಿಸಿದೆ. ಹೌದು, ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರು ಜನತಾ ಸಮಾವೇಶದ ವೇದಿಕೆ ಮೇಲೆಯೇ ನಾಗಠಾಣದ ಮಾಜಿ ಶಾಸಕ ದೇವಾನಂದ ಚಹ್ವಾಣ, ದೇವರ ಹಿಪ್ಪರಗಿ ಹಾಲಿ ಶಾಸಕ ರಾಜುಗೌಡ ಪಾಟೀಲ, ಇಂಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಬಿ.ಡಿ.ಬಿರಾದಾರ ಹಾಗೂ ಬಸವನ ಬಾಗೇವಾಡಿ ಅಭ್ಯರ್ಥಿಯಾಗಿದ್ದ ಅಪ್ಪುಮನಗೂಳಿ ಅವರನ್ನು ಹೊಗಳಿ, ಹಾರೈಸಿ, ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಆಶೀರ್ವದಿಸಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಂತೂ ನಾಲ್ಕೂ ಕ್ಷೇತ್ರಗಳ ಸೋತ, ಗೆದ್ದ ಅಭ್ಯರ್ಥಿಗಳನ್ನು ತಮ್ಮ ಅಕ್ಕಪಕ್ಕ ನಿಲ್ಲಿಸಿಕೊಂಡು, ಚುನಾವಣಾ ಪ್ರಚಾರವನ್ನೇ ನಡೆಸಿದ್ದಾರೆ. ಅಲ್ಲದೇ, ಈ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಬಲವಾಗಿರುವುದು ಈ ಹಿಂದಿನ ಚುನಾವಣಾ ಫಲಿತಾಂಶಗಳಲ್ಲಿ ಸಾಬೀತಾಗಿರುವುದರಿಂದ ಜೆಡಿಎಸ್ ಮುಂದಿನ ದಿನಗಳಲ್ಲಿ ಪ್ರಬಲ ಹಕ್ಕು ಮಂಡಿಸುವುದು ಬಹುತೇಕ ನಿಶ್ಚಿತವಾಗಿದೆ. ಜೆಡಿಎಸ್‌ನ ಆರಂಭಿಕ ನಡೆಯು ನಾಗಠಾಣ, ಇಂಡಿ, ಬಸವನ ಬಾಗೇವಾಡಿ, ದೇವರ ಹಿಪ್ಪರಗಿ ಕ್ಷೇತ್ರಗಳ ಬಿಜೆಪಿಯ ಆಕಾಂಕ್ಷಿಗಳಲ್ಲಿ ಈಗಲೇ ತಳಮಳ ಸೃಷ್ಟಿಸಿದೆ.

ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇರುವಾಗಲೇ ಜೆಡಿಎಸ್‌ನ ಈ ಆಕ್ರಮಣಕಾರಿ ನಡೆಯು ಭವಿಷ್ಯದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಗೆ ದಕ್ಕೆ ತರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಆದರೆ, ಬಿಜೆಪಿ ವರಿಷ್ಠರು ಈ ವಿಷಯದಲ್ಲಿ ಜೆಡಿಎಸ್ ಅನ್ನು ಕಟ್ಟಿಹಾಕಲು ಯಾವ ತಂತ್ರ ಅನುಸರಿಸಲಿದ್ದಾರೆ, ಜೆಡಿಎಸ್‌ ಕೇಳಿದ ನಾಲ್ಕೂ ಕ್ಷೇತ್ರಗಳ ಬದಲಿಗೆ ಎರಡು ಕ್ಷೇತ್ರಗಳನ್ನಷ್ಟೇ ಕೊಡುತ್ತಾರೋ ಅಥವಾ ಮೂರು ಕ್ಷೇತ್ರಗಳನ್ನು ಬಿಟ್ಟುಕೊಡುತ್ತಾರೋ ಇಲ್ಲವೇ, ಕ್ಷೇತ್ರ ಹಂಚಿಕೆ ವಿಷಯವಾಗಿಯೇ ಮೈತ್ರಿಗೆ ದಕ್ಕೆ ಬಂದೊದಗಲಿದೆಯೋ ಎಂಬುದು ರಾಜಕೀಯವಾಗಿ ಕುತೂಹಲ ಮೂಡಿಸಿದೆ. ಬಸವನಬಾಗೇವಾಡಿ, ಇಂಡಿ, ನಾಗಠಾಣದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈ ಕ್ಷೇತ್ರಗಳಲ್ಲಿ ಮುಂಬರುವ ದಿನಗಳಲ್ಲಿ ಜೆಡಿಎಸ್‌ ಅಂದುಕೊಂಡಂತೆ ನಡೆದು, ಬಿಜೆಪಿಯೂ ಬೆಂಬಲವಾಗಿ ನಿಂತರೆ ಕಾಂಗ್ರೆಸ್‌ಗೆ ದೊಡ್ಡ ನಷ್ಟವಾಗುವ ಸಾಧ್ಯತೆಗಳು ಅಧಿಕವಾಗಿವೆ ಎಂಬ ವಿಶ್ಲೇಷಣೆಯೂ ನಡೆದಿದೆ.

ಒಟ್ನಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ, ವಿಜಯಪುರ, ಬಬಲೇಶ್ವರ ಮತ್ತು ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಜೆಡಿಎಸ್‌ ಬೆಂಬಲಿತ ಮತಗಳು ವರ್ಗಾವಣೆಯಾದರೆ ಅಲ್ಲಿಯೂ ಕಾಂಗ್ರೆಸ್‌ಗೆ ಅಘಾತ ಎದುರಾಗಬಹುದು ಎಂದು ಹೇಳಲಾಗುತ್ತಿದೆ. ಯಾವುದಕ್ಕೂ ಇನ್ನೂ ಎರಡೂವರೆ ವರ್ಷ ಕಾದುನೋಡಬೇಕಿದೆ.

Tags:

error: Content is protected !!