ಇರಾನ್-ಇಸ್ರೇಲ್ ಯುದ್ಧದ ಕಾರ್ಮೋಡ ಇದೀಗ ಬಾಗಲಕೋಟೆಯ ಹೋಟೆಲ್ ಮಾಲೀಕರ ಜೇಬಿಗೆ ಕತ್ತರಿ ಹಾಕುತ್ತಿದೆ. ವಾಣಿಜ್ಯ ಸಿಲಿಂಡರ್ ಬೆಲೆ ದಿಢೀರ್ ಏರಿಕೆಯಾಗಿದ್ದರೂ, ಗ್ರಾಹಕರಿಗೆ ಹೊರೆಯಾಗಬಾರದೆಂದು ಹಳೆಯ ದರದಲ್ಲೇ ತಿಂಡಿ ನೀಡಲಾಗುತ್ತಿದೆ. ಆದರೆ ಈ ನಷ್ಟದ ಹಾದಿ ಎಷ್ಟು ದಿನ? ಎಂಬ ಆತಂಕ ಉದ್ಯಮಿಗಳಲ್ಲಿ ಮನೆಮಾಡಿದೆ.

ಬಾಗಲಕೋಟೆ ನಗರದಲ್ಲಿ ಇರಾನ್ ಮತ್ತು ಇಸ್ರೇಲ್ ಸಂಘರ್ಷದ ಪರಿಣಾಮ ಹೋಟೆಲ್ ಉದ್ಯಮದ ಮೇಲೆ ನೇರವಾಗಿ ತಟ್ಟಿದೆ. ನವನಗರದ ಪ್ರಸಿದ್ಧ ಕಾಮತ್ ಅನ್ನಲೀಲಾ ಹೋಟೆಲ್ ಸೇರಿದಂತೆ ನಗರದ ಬಹುತೇಕ ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದರೂ, ಮಾಲೀಕರು ಮಾತ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೇವಲ ಒಂದು ತಿಂಗಳ ಅವಧಿಯಲ್ಲಿ 21 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1930 ರೂಪಾಯಿಯಿಂದ ಬರೋಬ್ಬರಿ 2570 ರೂಪಾಯಿಗೆ ಏರಿಕೆಯಾಗಿರುವುದು ಹೋಟೆಲ್ ಮಾಲೀಕರನ್ನು ಕಂಗಾಲಾಗಿಸಿದೆ. ಈ ತಿಂಗಳ ಆರಂಭದಲ್ಲಿ 2350 ರೂಪಾಯಿ ಇದ್ದ ಬೆಲೆ, ಈಗ ಮತ್ತೆ ಏರಿಕೆಯಾಗುವ ಮೂಲಕ ಉದ್ಯಮದ ಲಾಭಾಂಶವನ್ನೇ ನುಂಗಿ ಹಾಕುತ್ತಿದೆ.
ಹೆಚ್ಚಿನ ಬೆಲೆ ನೀಡಿ ಗ್ಯಾಸ್ ಖರೀದಿಸುತ್ತಿದ್ದರೂ, ಹೋಟೆಲ್ ಮಾಲೀಕರು ಸದ್ಯಕ್ಕೆ ಉಪಹಾರದ ದರವನ್ನು ಹೆಚ್ಚಿಸದೆ ಹಳೆಯ ಬೆಲೆಗೇ ಗ್ರಾಹಕರಿಗೆ ಸೇವೆ ನೀಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಕಾಮತ್ ಅನ್ನಲೀಲಾ ಹೋಟೆಲ್ ಮಾಲೀಕರು, “ಗ್ಯಾಸ್ ಪೂರೈಕೆಯಲ್ಲಿ ಸದ್ಯಕ್ಕೆ ಸಮಸ್ಯೆಯಿಲ್ಲ, ಆದರೆ ಬೆಲೆ ಏರಿಕೆ ಅಸಹನೀಯವಾಗಿದೆ. ಇದೇ ರೀತಿ ಬೆಲೆ ಏರಿಕೆ ಮುಂದುವರೆದರೆ ಹೋಟೆಲ್ ನಡೆಸುವುದು ಅಸಾಧ್ಯವಾಗಿ ಉದ್ಯಮವನ್ನೇ ಬಂದ್ ಮಾಡುವ ಸ್ಥಿತಿ ಬರಬಹುದು,” ಎಂದು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಬೆಲೆ ನಿಯಂತ್ರಿಸದಿದ್ದರೆ ಬಾಗಲಕೋಟೆಯ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತವಾಗಿದೆ.
