Vijaypura

ಪೊಲೀಸರೊಂದಿಗೆ ರೈತರ ಮಾತಿನ ಚಕಮಕಿ; ಉಗ್ರ ಹೋರಾಟದ ಎಚ್ಚರಿಕೆ

Share

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಸಮೀಪದ ಎನ್‌ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿ ಸಮಸ್ಯೆ ತೀವ್ರಗೊಂಡಿದ್ದು, ರೈತರು ಪ್ರತಿಭಟನೆಗೆ ಇಳಿದ ಘಟನೆ ನಡೆದಿದೆ. ಕೂಡಗಿ ಬಳಿಯ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಉತ್ಪತ್ತಿಯಾಗುವ ಬೂದಿಯನ್ನು ಕೃತಕ ಕೆರೆಗಳಲ್ಲಿ ಸಂಗ್ರಹಿಸಿ ನಂತರ ಬೇರೆಡೆ ಸಾಗಾಟ ಮಾಡಲಾಗುತ್ತದೆ. ಆದರೆ, ಈ ಕೆರೆಗಳಿಂದ ಹಾರುಬೂದಿ ಗಾಳಿಯಲ್ಲಿ ಹಾರುತ್ತಿದ್ದು, ಸುತ್ತಮುತ್ತಲಿನ ರೈತರ ಜಮೀನುಗಳಿಗೆ ಬಿದ್ದು ಬೆಳೆ ಹಾನಿಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮಸೂತಿ ಗ್ರಾಮದ ಬಳಿ ಇರುವ ಕೃತಕ ಕೆರೆಗಳಿಗೆ ರೈತ ಸಂಘದ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ತೆರೆದ ಟಿಪ್ಪರ್ ವಾಹನಗಳಲ್ಲಿ ಹಾರುಬೂದಿ ಸಾಗಾಟ ಮಾಡುತ್ತಿರುವುದನ್ನು ತಡೆದು ಪ್ರತಿಭಟನೆ ನಡೆಸಿದರು.

ರೈತರ ಪ್ರಕಾರ, ಹಾರುಬೂದಿ ಬೆಳೆಗಳ ಮೇಲೆ ಬಿದ್ದು ಅವು ಹಾಳಾಗುತ್ತಿದ್ದು, ಜೊತೆಗೆ ಆರೋಗ್ಯ ಸಮಸ್ಯೆಗಳು ಕೂಡ ಉಂಟಾಗುತ್ತಿವೆ. ಅಲ್ಲದೇ, ಫಲವತ್ತಾದ ಜಮೀನಿನ ಮಣ್ಣು ಹಾಳಾಗುವ ಭೀತಿ ಎದುರಾಗಿದೆ. ಕುಡಿಯುವ ನೀರಿನ ಮೂಲಗಳು ಹಾಗೂ ಅಂತರ್ಜಲಕ್ಕೂ ಮಾಲಿನ್ಯ ತಗುಲುವ ಆತಂಕ ವ್ಯಕ್ತವಾಗಿದೆ.
ಪ್ರತಿಭಟನೆ ವೇಳೆ ಹಾರುಬೂದಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಚಾಲಕರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಎನ್‌ಟಿಪಿಸಿ ಸ್ಥಾಪನೆಯ ವೇಳೆ ಹಾರುಬೂದಿಯಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ, ಆಧುನಿಕ ಹಾಗೂ ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾರುಬೂದಿಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಬೇಕು, ತೆರೆದ ವಾಹನಗಳಲ್ಲಿ ಸಾಗಾಟ ನಿಲ್ಲಿಸಿ ಮುಚ್ಚಿದ ವಾಹನಗಳಲ್ಲೇ ಸಾಗಾಟ ಮಾಡಬೇಕು, ರೈತರ ಜಮೀನಿಗೆ ಬೂದಿ ಬೀಳದಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು ಎನ್ ಟಿ ಪಿ ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

error: Content is protected !!