ರಾಜ್ಯ ಸರ್ಕಾರದ ಹೊಸ ‘ಜಾಹೀರಾತು ನೀತಿ-2026’ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಅಸ್ತಿತ್ವಕ್ಕೆ ಮಾರಕವಾಗಿದೆ ಎಂದು ಬೆಳಗಾವಿ ಜಿಲ್ಲಾ ಸಂಪಾದಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿರುವ ಸಂಘವು, ಕಠಿಣ ನಿಯಮಗಳನ್ನು ಕೂಡಲೇ ಸರಳಗೊಳಿಸುವಂತೆ ಆಗ್ರಹಿಸಿದೆ.
ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಸಂಪಾದಕರ ಸಂಘದ ನಿಯೋಗ, ಹೊಸ ನೀತಿಯಲ್ಲಿನ ಅವೈಜ್ಞಾನಿಕ ನಿಯಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿತು. ಪತ್ರಿಕೆಗಳಿಗೆ ಕಡ್ಡಾಯ ಸ್ವಂತ ಮುದ್ರಣಾಲಯ, ಹೆಚ್ಚಿನ ಸಂಖ್ಯೆಯ ಖಾಯಂ ಸಿಬ್ಬಂದಿ ಮತ್ತು ಪ್ರತಿ ಎರಡು ವರ್ಷಕ್ಕೊಮ್ಮೆ ದಾಖಲೆ ಸಲ್ಲಿಕೆಯಂತಹ ಷರತ್ತುಗಳು ಸಣ್ಣ ಪತ್ರಿಕೆಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಗಡಿ ಭಾಗದ ಕನ್ನಡ ಪತ್ರಿಕೆಗಳಿಗೆ ನೀಡುತ್ತಿದ್ದ ವಿಶೇಷ ಪ್ರೋತ್ಸಾಹವನ್ನು ಮುಂದುವರಿಸಬೇಕು ಹಾಗೂ ಜಾಹೀರಾತು ದರವನ್ನು ಕಾಲಕಾಲಕ್ಕೆ ಹೆಚ್ಚಿಸಬೇಕು ಎಂದು ಸಂಘದ ಅಧ್ಯಕ್ಷ ಮುರುಗೇಶ್ ಶಿವಪೂಜಿ ಒತ್ತಾಯಿಸಿದರು.
ಜಾಹೀರಾತು ದರ ಇಳಿಕೆ ಮತ್ತು ಸಿಬ್ಬಂದಿ ಸಂಖ್ಯೆಯ ಕಠಿಣ ನಿಯಮದಿಂದಾಗಿ ಅನೇಕ ಪತ್ರಿಕೆಗಳು ಅರ್ಹತೆ ಕಳೆದುಕೊಳ್ಳುವ ಭೀತಿಯಲ್ಲಿವೆ. ಇದರಿಂದ ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಭಾರಿ ಹೊಡೆತ ಬೀಳಲಿದ್ದು, ಎ.ಬಿ. ಸಿಂಗ್ ಮತ್ತು ಪಿ. ರಾಮಯ್ಯ ಸಮಿತಿಗಳ ಶಿಫಾರಸ್ಸಿನಂತೆ ಪ್ರಾದೇಶಿಕ ಪತ್ರಿಕೆಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮನವಿ ಸ್ವೀಕರಿಸಿದ ಸಚಿವರು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
