ಬೆಳಗಾವಿಯ ತುರಮುರಿ ತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಣಕಹಳೆ ಊದಿದ್ದಾರೆ. “ನಗರದ ಕಸ ಗ್ರಾಮೀಣ ಭಾಗಕ್ಕೆ ಬೇಡ” ಎಂದು ಗುಡುಗಿರುವ ಅವರು, ಜನರ ಮನೆ ಮಗಳಾಗಿ ತಾವೂ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಸಮಸ್ಯೆಗೆ ಕಾರಣರಾದ ಸಂಸದರು, ಶಾಸಕರು ಮತ್ತು ಮಹಾಪೌರರ ಮನೆ ಮುಂದೆ ಕಸದೊಂದಿಗೆ ಹೋಗಿ ಪ್ರತಿಭಟಿಸುವಂತೆ ಗ್ರಾಮಸ್ಥರಿಗೆ ಕರೆ ನೀಡುವ ಮೂಲಕ ಹೋರಾಟಕ್ಕೆ ಹೊಸ ರೂಪ ನೀಡಿದ್ದಾರೆ.

ಬೆಳಗಾವಿಯ ತುರಮುರಿ ಗ್ರಾಮದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕವನ್ನು ಕೂಡಲೇ ರದ್ಧುಗೊಳಿಸಬೇಕೆಂದು ಹಿಂಡಲಗಾದ ಶ್ರೀ ಕಲ್ಮೇಶ್ವರ ಮಂದಿರದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಿವಾಸದ ವರೆಗೆ ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಯಿತು.

ನಂತರ ಸಚಿವರಿಗೆ ಮನವಿ ಅರ್ಪಿಸಿ ಮಾತನಾಡಿದ ಗ್ರಾಮಸ್ಥರು 2006 ರಿಂದ ತುರಮುರಿಯ ತ್ಯಾಜ್ಯ ವಿಲೇವಾಗಿ ಘಟಕಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸುತ್ತಮುತ್ತಲ ಗ್ರಾಮಗಳಿಗೆ ಇದು ಸಮಸ್ಯೆಯಾಗಿದೆ. ಊಟ ಮಾಡಲೂ ಕೂಡ ಬಾರದಂತೆ ನೋಣಗಳು ಹೆಚ್ಚಾಗಿವೆ. ರೋಗ ರುಜಿನಗಳ ಭೀತಿ ಎದುರಾಗಿದೆ. ಕೂಡಲೇ ಅದನ್ನ ರದ್ಧು ಮಾಡಬೇಕು. ಸಚಿವರು ಇದನ್ನ ದಯವಿಟ್ಟು ಗಣನೆಗೆ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಕಾಡಾ ಅಧ್ಯಕ್ಷ ಯುವರಾಜ್ ಕದಮ್ ಅವರು ಕೂಡ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಈಗಾಗಲೇ ತ್ಯಾಜ್ಯ ವಿಲೇವಾರಿ ಘಟಕದಿಂದ ಬಗೆ ಬಗೆಯ ಸಮಸ್ಯೆಗಳು ತಲೆದೋರಿದ್ದು, ಮುಂಬರುವ ದಿನಗಳಲ್ಲಿ ಕೊಳವೆ ಭಾವಿಗಳು ಕೂಡ ಕಲುಷಿತವಾಗುವ ಆತಂಕ ವ್ಯಕ್ತಪಡಿಸಿದರು.
ಕೂಡಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಗರಾಭಿವೃಧ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ವಿಡ್ಹಿಯೋ ಕರೆ ಮಾಡಿ ನೆರೆದಿದ್ದ ಜನ ಸಮೂಹವನ್ನು ತೋರಿಸುತ್ತ, ತಲೆದೋರಿದ ಸಮಸ್ಯೆಯನ್ನು ಗಮನಕ್ಕೆ ತಂದರು. ಈ ವೇಳೆ ಮಾತನಾಡಿದ ನಗರಾಭಿವೃಧ್ಧಿ ಸಚಿವ ಬೈರತಿ ಸುರೇಶ್ ಅವರು ಈ ಕುರಿತು ಪರಿಶೀಲನೆ ನಡೆಸಿ, ಸಂಪುಟದಲ್ಲಿ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.

ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದು ಕೇವಲ ತಮ್ಮ ಜವಾಬ್ದಾರಿಯಾಗಿರದೇ, ಮಹಾನಗರ ಪಾಲಿಕೆಯ ಪ್ರಮುಖರಾದ ಮಹಾಪೌರರು, ನಗರ ಶಾಸಕರು, ಮತ್ತು ಸಂಸದರ ಜವಾಬ್ದಾರಿ ಕೂಡ ಆಗಿದೆ. ನಗರದ ಪ್ರದೇಶದ ತ್ಯಾಜ್ಯ ಗ್ರಾಮೀಣ ಭಾಗಕ್ಕೇಕೆ? ನಗರದ ಕಸ ಗ್ರಾಮೀಣ ಭಾಗಕ್ಕೆ ಬೇಡ. ಮಹಾನಗರ ಪಾಲಿಕೆಯ ಪ್ರಮುಖರಾದ ಮಹಾಪೌರರು, ನಗರ ಶಾಸಕ ಆಸೀಫ್ ಸೇಠ್, ದಕ್ಷಿಣ ಶಾಸಕ ಅಭಯ್ ಪಾಟೀಲ್, ಮತ್ತು ಸಂಸದ ಜಗದೀಶ್ ಶೆಟ್ಟರ್ ನಿವಾಸದೆದುರು ಕಸದೊಂದಿಗೆ ಹೋಗಿ ಪ್ರತಿಭಟನೆ ನಡೆಸೋಣ. ಗ್ರಾಮೀಣ ಭಾಗದ ಜನರ ಮನೆ ಮಗಳಾಗಿ ನಾನು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇನೆ. ಅವರು ತಮ್ಮ ಜವಾಬ್ದಾರಿ ಅರೆತು ಜನರ ಸಮಸ್ಯೆ ಪರಿಹರಿಸಲಿ ಎಂದರು.
ಮುಂದುವರೆದು ಮಾತನಾಡಿದ ಸಚಿವರು ಕಸವನ್ನು ಗ್ರಾಮೀಣ ಭಾಗದಲ್ಲಿ ಎಸೆದು ಹೋಗುವವರು ಜನರಿಗೆ ಏನು ನೀಡಿದ್ದಾರೆ? ಏಪ್ರೀಲ್ 9 ರೊಳಗೆ ಗ್ರಾಮಸ್ಥರು ಕಸ ವಿಲೇವಾರಿ ಘಟಕದ ವಿರುದ್ಧ ಉಭಯ ಶಾಸಕರು, ಸಂಸದರು, ಮಹಾಪೌರ, ಉಪಮಹಾಪೌರರ ಮನೆ ಎದುರು ಕಸದೊಂದಿಗೆ ಪ್ರತಿಭಟಿಸಿ ಅವರ ಜವಾಬ್ದಾರಿಯನ್ನು ನೆನಪಿಸಿ ಕೊಡಬೇಕು. ನಂತರ ತಾವು ಮಹಾನಗರ ಪಾಲಿಕೆ ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಬೃಹತ್ ಸಭೆಯನ್ನು ನಡೆಸಲಾಗುವುದು. ಗ್ರಾಮಮಟ್ಟದ ಕಸವನ್ನು ಅಲ್ಲಿಯೇ ವಿಲೇವಾರಿ ಮಾಡಬೇಕು. ತುರಮುರಿಗೆ ಕಳುಹಿಸಬಾರದು ಎಂದರು.
ಈ ಸಂದರ್ಭದಲ್ಲಿ ಚಂದ್ರಕಾಂತ್ ಜಾಧವ್, ಪುಂಡಲೀಕ ಖಾಂಡೇಕರ, ನಾಗರಾಜ್ ಜಾಧವ್, ಸೋಮನಾಥ್ ಬೆಳಗಾಂವಕರ, ಪುಂಡಲೀಕ ಬೆಳಗಾಂವಕರ, ಸುನೀಲ್ ಬೆಳಗುಂದಕರ, ಸಿದ್ಧಪ್ಪ ಕಾಂಬಳೆ, ಅನೀಲ್ ತಂಗಣಕರ, ಆನಂದ ಬಾಂಗೆ, ಶಿವಾಜೀರಾವ ಖಾಂಡೇಕರ, ಬಾಳು ಅಷ್ಠೇಕರ, ನಾರಾಯಣ್ ಶಹಾಪೂರಕರ, ಯಾದವ್ ಬೆಳಗಾಂವಕರ, ಮಾಜಿ ಸೈನಿಕರ ಸಂಘಟನೆ, ತುರಮುರಿ ಗ್ರಾಮಸ್ಥರು, ಹಿಂಡಲಗಾ, ಅಂಬೇವಾಡಿ, ಮಣ್ಣೂರ, ಗೋಜಗಾ, ಬಾಚಿ, ಬಸುರ್ತೆ, ಉಚಗಾಂವ, ಕೊಣೆವಾಡಿಯ ಸಾವಿರಾರು ಗ್ರಾಮಸ್ಥರು ಭಾಗಿಯಾಗಿದ್ಧರು.
