ದಾವಣಗೆರೆ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾಗಿದ್ದ ಅಸಮಾಧಾನವನ್ನು ಶಮನಗೊಳಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ದಾವಣಗೆರೆಯಲ್ಲಿ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್‌ಗೆ ಟಿಕೆಟ್ ನೀಡಿರುವುದನ್ನು ಸಮರ್ಥಿಸಿಕೊಂಡರಲ್ಲದೆ, ನಾಮಪತ್ರ ಹಿಂಪಡೆದ ಆಕಾಂಕ್ಷಿಗಳಿಗೆ ಧನ್ಯವಾದ ಅರ್ಪಿಸಿದರು.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯನವರು, ದಾವಣಗೆರೆಗೆ ತೆರಳಿ ಆಕಾಂಕ್ಷಿಗಳ ಮನವೊಲಿಸಲಾಗಿದೆ. ಶೇ. 70 ರಷ್ಟು ಮತದಾರರು ದಾವಣಗೆರೆಯಲ್ಲಿದ್ದಾರೆ. ಈ ಹಿನ್ನೆಲೆ ಅಲ್ಪಸಂಖ್ಯಾತರರೂ ಕೂಡ ಟಿಕೇಟ್ ಆಕಾಂಕ್ಷಿಗಳಾಗಿದ್ದರು. ಹೈಕಮಾಂಡ್ ಹಾಗೂ ತಾವು ಪರಿಶೀಲನೆ ನಡೆಸಿ, ಮಲ್ಲಿಕಾರ್ಜುನ್ ಅವರ ಮಗ ಸಮರ್ಥ ಅವರಿಗೆ ಟಿಕೇಟ್ ನೀಡಲಾಗಿದೆ. ನಿನ್ನೆ 11 ಜನರು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದು, ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ನಿಧನರಾದ ಶಾಸಕರ ಕುಟುಂಬದವರಿಗೆ ಟಿಕೇಟ್ ನೀಡುವುದು ಸಂಪ್ರದಾಯವಾಗಿದ್ದು, ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಮೃತ ಶಾಸಕರ ಕುಟುಂಬಸ್ಥರಿಗೆ ಟಿಕೇಟ್ ನೀಡಲಾಗಿದೆ ಎಂದರು.
