Bagalkot

ಬಾಗಲಕೋಟೆ ಉಪಸಮರಕ್ಕೆ ದಿನಾಂಕ ಫಿಕ್ಸ್: ಮೇಟಿ ಪುತ್ರರ ನಡುವೆ ಟಿಕೆಟ್ ಫೈಟ್; ಸಿಎಂ ಸಿದ್ದರಾಮಯ್ಯಗೆ ಶುರುವಾಯ್ತು ತಲೆನೋವು!

Share

ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ಮುಹೂರ್ತ ನಿಗದಿಯಾಗಿದೆ. ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಒಂದೆಡೆ ಬಿಜೆಪಿ ಅಭ್ಯರ್ಥಿ ಫೈನಲ್ ಎನ್ನಲಾಗುತ್ತಿದ್ದರೆ, ಇತ್ತ ಕಾಂಗ್ರೆಸ್‌ನಲ್ಲಿ ಮೇಟಿ ಅವರ ಇಬ್ಬರು ಪುತ್ರರ ನಡುವೆಯೇ ಟಿಕೆಟ್‌ಗಾಗಿ ಭಾರೀ ಪೈಪೋಟಿ ಶುರುವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಬಾಗಲಕೋಟೆ ಜಿಲ್ಲೆಯ ರಾಜಕೀಯ ಕಣವೀಗ ಉಪಚುನಾವಣೆಯ ಘೋಷಣೆಯೊಂದಿಗೆ ರಂಗೇರಿದೆ. ಇಂದಿನಿಂದಲೇ ನೀತಿಸಂಹಿತೆ ಜಾರಿಗೆ ಬಂದಿದ್ದು, ಮಾರ್ಚ್ 23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಕ್ಷೇತ್ರದಲ್ಲಿ ಒಟ್ಟು 2,59,260 ಮತದಾರರಿದ್ದು, ಈ ಬಾರಿ ಮಹಿಳಾ ಮತದಾರರೇ (1,32,476) ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಒಟ್ಟು 319 ಮತಗಟ್ಟೆಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಬಳಕೆಯಾಗಲಿದ್ದು, ಜಿಲ್ಲಾಡಳಿತವು ಚುನಾವಣೆಗೆ ಸರ್ವ ಸನ್ನದ್ಧವಾಗಿದೆ. ವಿಶೇಷವೆಂದರೆ ಕ್ಷೇತ್ರದಲ್ಲಿ ನೂರು ವರ್ಷ ದಾಟಿದ 44 ಹಿರಿಯ ಮತದಾರರಿದ್ದು, ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆಗೆ ಏಪ್ರಿಲ್ 9ರಂದು ಮತದಾನ ನಡೆಯಲಿದೆ.

ಆದರೆ, ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ದೊಡ್ಡ ಗೊಂದಲ ಸೃಷ್ಟಿಯಾಗಿದೆ. ದಿ. ಎಚ್.ವೈ. ಮೇಟಿ ಅವರ ಪುತ್ರರಾದ ಮಲ್ಲಿಕಾರ್ಜುನ್ ಮೇಟಿ ಮತ್ತು ಉಮೇಶ್ ಮೇಟಿ ಇಬ್ಬರೂ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ. ಮಕ್ಕಳ ನಡುವಿನ ಈ ಪೈಪೋಟಿ ಸಿಎಂ ಸಿದ್ದರಾಮಯ್ಯ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇತ್ತ ಬಿಜೆಪಿಯಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ್ ಅವರ ಹೆಸರು ಬಹುತೇಕ ಖಚಿತವಾಗಿದ್ದು, ಕಮಲ ಪಡೆ ಸದ್ದಿಲ್ಲದೆ ಪ್ರಚಾರಕ್ಕೆ ಅಣಿಯಾಗುತ್ತಿದೆ. ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿರುವ ಈ ಚುನಾವಣೆಯಲ್ಲಿ ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ಮೇ 4ರ ಫಲಿತಾಂಶದಲ್ಲಿ ತಿಳಿಯಲಿದೆ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಕಾರ್ಯಕರ್ತರು ಸಂಪೂರ್ಣ ಸಜ್ಜಾಗಿದ್ದು, ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಅತ್ಯಂತ ಬಲಿಷ್ಠವಾಗಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ವೀರಣ್ಣ ಚರಂತಿಮಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಪ್ರತಿನಿತ್ಯ ಬೂತ್ ಮಟ್ಟದ ಸಭೆಗಳು ಹಾಗೂ ಮಹಿಳಾ ಘಟಕದ ಸಭೆಗಳು ನಡೆಯುತ್ತಿದ್ದು, ಇಂದು ಬಂಜಾರಾ ಸಮಾಜದ ಯುವಕರು

ಕೂಡ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕುರಿತು ಹಿರಿಯ ನಾಯಕರು ಚರ್ಚಿಸುತ್ತಿದ್ದು, ಈ ಒಂದು ವಾರದಲ್ಲಿ ಎಲ್ಲವೂ ಅಂತಿಮಗೊಂಡು ಹಿರಿಯರು ಸೂಚಿಸಿದ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಉಪಚುನಾವಣೆಯು 2028ರ ಚುನಾವಣೆಯ ದಿಕ್ಸೂಚಿಯಾಗಲಿದ್ದು, ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕು ದಿನಗಳ ಕಾಲ ಪ್ರಚಾರ ಕೈಗೊಳ್ಳಲಿದ್ದಾರೆ. ಅವರೊಂದಿಗೆ ರಾಜ್ಯ ನಾಯಕರುಗಳಾದ ಬಿ.ವೈ. ವಿಜಯೇಂದ್ರ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಗಣ್ಯರು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಅನುಕಂಪದ ಅಲೆ ಇಲ್ಲದಿದ್ದರೂ ಬಿಜೆಪಿ ಗೆಲುವಿಗೆ ಪೂರಕವಾದ ವಾತಾವರಣವಿದ್ದು, ಸರ್ಕಾರವೇ ಇಲ್ಲಿ ಮೊಕ್ಕಾಂ ಹೂಡಿದರೂ ಬಿಜೆಪಿ ಗೆಲುವು ನಿಶ್ಚಿತ ಎಂದು ಚರಂತಿಮಠ್ ಅವರು ತಿಳಿಸಿದ್ದಾರೆ.

Tags:

error: Content is protected !!