ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವು ದಲಿತ ಯುವಕನ ಹತ್ಯೆಯೊಂದಿಗೆ ದುರಂತದಲ್ಲಿ ಅಂತ್ಯಗೊಂಡಿದೆ. ವಾರ್ಷಿಕೋತ್ಸವವನ್ನು ಮೇಲ್ಚಾವಣಿ ಮೇಲೆ ಕುಳಿತು ವೀಕ್ಷಿಸುತ್ತಿದ್ದ ಸುಧೀರ್ ಪಾಂಗೆ ಎಂಬ ಯುವಕನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ಇದೀಗ ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸಾವಳಗಿ ಸರ್ಕಾರಿ ಕೆಜಿಎಸ್ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ಈ ಭೀಕರ ಘಟನೆ ನಡೆದಿದೆ. 19 ವರ್ಷದ ಸುಧೀರ್ ಪಾಂಗೆ ಎಂಬ ದಲಿತ ಯುವಕ ಶಾಲೆಯ ಮೇಲ್ಚಾವಣಿಯ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದನು. ಈ ವೇಳೆ ಆತ ತನ್ನ ಮೇಲೆ ಕಲ್ಲು ಎಸೆದಿದ್ದಾನೆ ಎಂದು ಆರೋಪಿಸಿದ ರಾಜು, ವಿಜಯೇಂದ್ರ ಮತ್ತು ಮಲ್ಲಿಕಾರ್ಜುನ್ ಎಂಬ ಮೂವರು ಆರೋಪಿಗಳು, ಸುಧೀರ್ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುಧೀರ್‌ಗೆ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ಘಟನೆಯ ಕುರಿತು ಸಾವಳಗಿ ಪೊಲೀಸ್ ಠಾಣೆಯಲ್ಲಿ ಮೃತನ ಕುಟುಂಬಸ್ಥರು ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕೊಲೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಹಬ್ಬದ ವಾತಾವರಣದಲ್ಲಿದ್ದ ಗ್ರಾಮದಲ್ಲಿ ನಡೆದ ಈ ಅಮಾನವೀಯ ಕೃತ್ಯದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಸ್ತುತ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
