BELAGAVI

ಬೆಳಗಾವಿಯಲ್ಲಿ ಸೈಬರ್ ಹೈಜಾಕ್: ಡಿಜಿಟಲ್ ಅರೇಸ್ಟ್ ಹೆಸರಲ್ಲಿ ವೃದ್ಧ ಉದ್ಯಮಿಗೆ 15.45 ಕೋಟಿ ರೂ. ವಂಚನೆ; 390 ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದ ಖದೀಮರು!

Share

ಬೆಳಗಾವಿಯಲ್ಲಿ ಸೈಬರ್ ಕ್ರೈಮ್ ಇತಿಹಾಸದಲ್ಲೇ ಅತ್ಯಂತ ಭಯಾನಕ ಎನ್ನಬಹುದಾದ ವಂಚನೆ ಪ್ರಕರಣವೊಂದು ಬಯಲಾಗಿದೆ. ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ವೃದ್ಧ ಉದ್ಯಮಿಯೊಬ್ಬರನ್ನು ವಿಡಿಯೋ ಕಾಲ್ ಮೂಲಕ ಡಿಜಿಟಲ್ ಅರೇಸ್ಟ್ ಮಾಡಿದ ಖದೀಮರು, ಬರೋಬ್ಬರಿ 15 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಲೂಟಿ ಮಾಡಿದ್ದಾರೆ.

ಬೆಳಗಾವಿಯ ವೃದ್ಧ ಉದ್ಯಮಿಯೊಬ್ಬರನ್ನು ಗುರಿಯಾಗಿಸಿಕೊಂಡ ಸೈಬರ್ ವಂಚಕರು, ಮನಿ ಲಾಂಡರಿಂಗ್ ಕೇಸ್‌ನಲ್ಲಿ ಸಿಲುಕಿದ್ದೀರಿ ಎಂದು ಬೆದರಿಸಿ ಬರೋಬ್ಬರಿ 15 ಕೋಟಿ 45 ಲಕ್ಷ ರೂಪಾಯಿ ದೋಚಿದ್ದಾರೆ. ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕಾಲ್ ಮಾಡಿ ಉದ್ಯಮಿಯನ್ನು ‘ಡಿಜಿಟಲ್ ಅರೇಸ್ಟ್’ ಹೆಸರಿನಲ್ಲಿ ಕಟ್ಟಿಹಾಕಿದ ಖದೀಮರು, ಭಯದ ವಾತಾವರಣ ಸೃಷ್ಟಿಸಿ ಹಣ ವರ್ಗಾಯಿಸಿಕೊಂಡಿದ್ದಾರೆ. ತನಿಖೆ ಆರಂಭಿಸಿರುವ ಬೆಳಗಾವಿ ಸೈಬರ್ ಕ್ರೈಮ್ ಪೊಲೀಸರಿಗೆ ಶಾಕಿಂಗ್ ಮಾಹಿತಿ ಲಭ್ಯವಾಗಿದ್ದು, ಲೂಟಿ ಮಾಡಿದ ಹಣವನ್ನು ದೇಶದ ವಿವಿಧ ಭಾಗಗಳ ಸುಮಾರು 390 ಬ್ಯಾಂಕ್ ಖಾತೆಗಳಿಗೆ ಕೇವಲ ಕೆಲವೇ ನಿಮಿಷಗಳಲ್ಲಿ ವರ್ಗಾಯಿಸಲಾಗಿದೆ. ನೂರಾರು ‘ಮ್ಯೂಲ್ ಅಕೌಂಟ್’ಗಳನ್ನು ಬಳಸಿರುವ ಖದೀಮರು ಈಗಾಗಲೇ ಶೇಕಡಾ 95 ರಷ್ಟು ಹಣವನ್ನು ವಿತ್‌ಡ್ರಾ ಮಾಡಿಕೊಂಡಿದ್ದಾರೆ.

ಈ ಬೃಹತ್ ಜಾಲದ ಚೈನ್ ಲಿಂಕ್ ನೋಡಿ ಬೆಚ್ಚಿಬಿದ್ದಿರುವ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಅವರು ಪ್ರಕರಣದ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ಪತ್ರ ಬರೆದಿದ್ದಾರೆ. ಸದ್ಯ ಪೊಲೀಸರು 90 ಲಕ್ಷ ರೂಪಾಯಿಗಳನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಉಳಿದ ಹಣಕ್ಕಾಗಿ 390 ಅಕೌಂಟ್‌ಗಳ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ನೀಡಿರುವ ಕಮೀಷನರ್, ಕಾನೂನಿನಲ್ಲಿ “ಡಿಜಿಟಲ್ ಅರೇಸ್ಟ್” ಎಂಬ ಪದ್ಧತಿಯೇ ಇಲ್ಲ. ಯಾರಾದರೂ ಇಂತಹ ಕರೆಗಳನ್ನು ಮಾಡಿದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ಹೈಟೆಕ್ ವಂಚಕರ ಈ ಚಾಲಾಕಿತನ ಈಗ ಗಡಿ ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.

Tags:

error: Content is protected !!