BELAGAVI

ಬೆಳಗಾವಿಯಲ್ಲಿ ಸೈಬರ್ ವಂಚನೆ ಜಾಲ ಪತ್ತೆ: 1400 ಸಂಶಯಾಸ್ಪದ ಬ್ಯಾಂಕ್ ಖಾತೆಗಳ ಮೇಲೆ ನಿಗಾ!

Share

ಬೆಳಗಾವಿ ಜಿಲ್ಲೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳಲ್ಲಿ ಮ್ಯೂಲ್ ಅಕೌಂಟ್‌ಗಳ ಬಳಕೆ ಹೆಚ್ಚಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಡಿಜಿಪಿ ಸಿಐಡಿ ಕಚೇರಿಯಿಂದ ಬೆಳಗಾವಿ ಜಿಲ್ಲೆಗೆ ಒಟ್ಟು 1400 ಸಂಶಯಾಸ್ಪದ ಬ್ಯಾಂಕ್ ಖಾತೆಗಳನ್ನು ಪತ್ತೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.

ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಅನೇಕ ಜನರಿಂದ ವಂಚಕರು ನಾನಾ ಕಾರಣಗಳನ್ನು ಹೇಳಿ ಬ್ಯಾಂಕ್ ಖಾತೆ ತೆರೆಯಿಸಿಕೊಂಡು ದುರುಪಯೋಗಪಡಿಸಿಕೊಂಡಿರುವುದು ಪತ್ತೆಯಾಗಿದೆ. ಇಲ್ಲಿಯವರೆಗೆ ಮೂರು ಪ್ರಕರಣಗಳನ್ನು ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ನಿಪ್ಪಾಣಿ ಮೂಲದ ಐದು ಮಂದಿ ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿತರು ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಿಸಿ ಬೇರೆಯವರಿಗೆ ನೀಡಿರುವುದು ಬೆಳಕಿಗೆ ಬಂದಿದೆ ಎಂದರು.5 ಖಾತೆಗಳ ಮೇಲೆ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 14 ಪ್ರಕರಣಗಳು ದಾಖಲಾಗಿದ್ದು, ಸುಮಾರು 46,12,551 ರೂ. ಹಣ ವ್ಯವಹಾರ ನಡೆದಿದೆ ಎಂದರು.

ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದ ಇಬ್ಬರು ಆರೋಪಿತರು ಪರಿಚಯದ ಜನರಿಗೆ ಮೋಸ ಮಾಡಿ ಬ್ಯಾಂಕ್ ಖಾತೆಗಳನ್ನು ತೆಗೆಯಿಸಿ, ಪಾಸ್ಬುಕ್, ಎಟಿಎಮ್ ಹಾಗೂ ಸಿಮ್ ಕಾರ್ಡ್ ಪಡೆದುಕೊಂಡು ಸೈಬರ್ ವಂಚನೆಗೆ ಬಳಸಿಕೊಂಡಿರುವುದು ಪತ್ತೆಯಾಗಿದೆ.ಈ ಪ್ರಕರಣದಲ್ಲಿ 15 ಬ್ಯಾಂಕ್ ಖಾತೆಗಳ ಮೂಲಕ 42,13,076 ರೂಮ ಹಣ ವ್ಯವಹಾರವಾಗಿದ್ದು, ದೇಶದ ವಿವಿಧ ಕಡೆಗಳಲ್ಲಿ 68 ಪ್ರಕರಣಗಳು ದಾಖಲಾಗಿವೆ ಎಂದರು.

ರಾಮದುರ್ಗ ತಾಲೂಕಿನ ಸುರೇಬಾನ ಮನಿಹಾಳ ಗ್ರಾಮದ ಆರೋಪಿತನು ತನ್ನ ಹೆಸರಿನಲ್ಲಿ ಹಲವು ಬ್ಯಾಂಕ್ ಖಾತೆಗಳನ್ನು ತೆರೆಯಿಸಿ ಸೈಬರ್ ಅಪರಾಧಕ್ಕೆ ಬಳಸಿರುವುದು ಪತ್ತೆಯಾಗಿದೆ.ಒಟ್ಟು 04 ಖಾತೆಗಳ ಮೇಲೆ ದೇಶದ ವಿವಿಧ ರಾಜ್ಯಗಳಲ್ಲಿ 08 ಪ್ರಕರಣಗಳು ದಾಖಲಾಗಿದ್ದು, 14,31,301 ರೂ.ಹಣ ವ್ಯವಹಾರ ನಡೆದಿದೆ. ಆರೋಪಿತನನ್ನು ವಿಚಾರಣೆ ನಡೆಸಿ ಮನೆ ಶೋಧ ಮಾಡಲಾಗಿದೆ. ಇನ್ನಷ್ಟು ಸಂಪರ್ಕಗಳ ಬಗ್ಗೆ ತನಿಖೆ ಮುಂದುವರೆದಿದೆ ಎಂದರು‌. ಅಪರಿಚಿತರಿಗೆ ತಮ್ಮ ಬ್ಯಾಂಕ್ ಖಾತೆ, ಎಟಿಎಮ್ ಕಾರ್ಡ್ ಅಥವಾ ಸಿಮ್ ಕಾರ್ಡ್ ನೀಡಬಾರದು. ಸೈಬರ್ ವಂಚನೆಗೆ ಸಹಾಯ ಮಾಡಿದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Tags:

error: Content is protected !!