ವಿಜಯಪುರ ನಗರದ ನವರಸಪುರದ ಸುರಭಿ ಸಿದ್ದೇಶ್ವರ ಲೇಔಟ್ ನಲ್ಲಿ ಬಾಳೆಹೊನ್ನೂರು ರಂಭಾಪುರಿ ಮಹಾಪೀಠದ ಪರಮಪೂಜ್ಯ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ನಾಡಿನ ಅನೇಕ ಮಠಾಧೀಶರ ಪವಿತ್ರ ಸಮ್ಮುಖದಲ್ಲಿ ಈ ಐತಿಹಾಸಿಕ ಶಾಖಾ ಮಠದ ಭೂಮಿಪೂಜೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ನೆರವೇರಿಸಿದರು.


ಬಳಿಕ ಮಾತನಾಡಿದ ಸಚಿವರು ಈ ಮಹತ್ಕಾರ್ಯವು ವಿಜಯಪುರ ಜಿಲ್ಲೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿ ಉಳಿಯಲಿದೆ ಎಂದರು.

ಶತಮಾನಗಳಿಂದ ಬಸವತತ್ವಗಳನ್ನು, ಶರಣ ಸಂಸ್ಕೃತಿ ಮತ್ತು ಮೌಲ್ಯಗಳ ಬೆಳಕನ್ನು ಹರಡುತ್ತಿರುವ ರಂಭಾಪುರಿ ಮಹಾಪೀಠದ ಆಶೀರ್ವಾದ ಈಗ ವಿಜಯಪುರದ ನೆಲದಲ್ಲಿಯೂ ಶಾಶ್ವತವಾಗಿ ನೆಲೆಯೂರಲಿದ್ದು, ಭಕ್ತರಿಗೆ ಆತ್ಮೀಯ ಆಶ್ರಯವಾಗುವ ಪವಿತ್ರ ಕೇಂದ್ರವಾಗಿ ಈ ಶಾಖಾ ಮಠ ರೂಪುಗೊಳ್ಳಲಿದೆ ಎಂದರು. ಈ ಉದಾತ್ತ ಕಾರ್ಯದ ಆರಂಭಕ್ಕೆ ಸಾಕ್ಷಿಯಾಗಿರುವುದು ಸಂತಸದ ಸಂಗತಿಯಷ್ಟೇ ಅಲ್ಲ, ವಿಜಯಪುರದ ಆಧ್ಯಾತ್ಮಿಕ ಪರಂಪರೆಗೆ ಮತ್ತೊಂದು ಮಹತ್ವದ ಗರಿಮೆ ಸೇರ್ಪಡೆಯಾದ ಕ್ಷಣವೂ ಆಗಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಮಠಗಳ ಪೂಜ್ಯ ಮಠಾಧೀಶರುಗಳು, ಆಳಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಆರ್. ಪಾಟೀಲ್, ಸಮಾಜದ ಹಿರಿಯರು, ಸಹಸ್ರಾರು ಬಸವಭಕ್ತರು, ತಾಯಂದಿರು ಸಾರ್ವಜನಿಕರು ಉಪಸ್ಥಿತರಿದ್ದು, ಸಮಾರಂಭವನ್ನು ಯಶಸ್ವಿಗೊಳಿಸಿದರು.

