State

ಕಾಂಗ್ರೆಸ್ ಮಾನಸಿಕತೆ ಜಗತ್ತಿನ ಮುಂದೆ ಬೆತ್ತಲಾಗಿದೆ: ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ವಾಗ್ದಾಳಿ

Share

ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುವುದರಲ್ಲಿ ನಿಸ್ಸೀಮ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಕಿಡಿಹಾಕಿದ್ದಾರೆ. ಇತ್ತೀಚಿನ ಪ್ರತಿಭಟನೆಗಳ ಹತ್ತಿಕ್ಕುವಿಕೆ ಮತ್ತು ತುಷ್ಟೀಕರಣ ರಾಜಕಾರಣದ ಬಗ್ಗೆ ವಾಗ್ದಾಳಿ ನಡೆಸಿದ ಅವರು, ದುಬೈನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕೇಂದ್ರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳುವುದರಲ್ಲಿ ನಿಸ್ಸೀಮವಾಗಿದ್ದು, 53 ಸಾವಿರ ಹುದ್ದೆಗಳ ನೇಮಕಾತಿ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆನೆ ತುಳಿತಕ್ಕೆ ಒಳಗಾದವರಿಗೆ ಪರಿಹಾರ ಕೇಳಿದರೆ ಲಾಠಿ ಪ್ರಹಾರ ನಡೆಸುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ದೆಹಲಿ ಶೃಂಗಸಭೆಯ ಪ್ರತಿಭಟನೆಯನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್‌ನ ಮಾನಸಿಕತೆ ಜಗತ್ತಿನ ಮುಂದೆ ಬೆತ್ತಲಾಗಿದೆ ಎಂದು ಟೀಕಿಸಿದರು. ಧಾರವಾಡದ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡದ ಕ್ರಮವನ್ನು ಇಂದಿರಾಗಾಂಧಿ ಅವರ ತುರ್ತುಪರಿಸ್ಥಿತಿಗೆ ಹೋಲಿಸಿದ ಜೋಷಿ, ಈ ಸರ್ಕಾರ ತುಷ್ಟೀಕರಣದ ಪರಾಕಾಷ್ಠೆ ತಲುಪಿದೆ ಮತ್ತು ಪಾಕಿಸ್ತಾನ ಬೆಂಬಲಿಗರಿಗೆ ಕಾಂಗ್ರೆಸ್ ಆಡಳಿತ ಹಬ್ಬದಂತಿದೆ ಎಂದು ಆರೋಪಿಸಿದರು.

ಯುದ್ಧದ ಹಿನ್ನೆಲೆಯಲ್ಲಿ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಯ ಕುರಿತು ಮಾತನಾಡಿದ ಸಚಿವರು, ಸಂಕಷ್ಟದಲ್ಲಿರುವವರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು. “ನಾನು ಕೂಡಲೇ ದೆಹಲಿಗೆ ತೆರಳಿ ಸಂಬಂಧಪಟ್ಟ ಮಂತ್ರಾಲಯಗಳೊಂದಿಗೆ ಈ ಕುರಿತು ಚರ್ಚೆ ನಡೆಸಲಿದ್ದೇನೆ. ಮೋದಿ ಸರ್ಕಾರ ಈ ಹಿಂದೆ ಅನೇಕ ಸಂಕಷ್ಟದ ಸಂದರ್ಭಗಳಲ್ಲಿ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದ ಇತಿಹಾಸ ಹೊಂದಿದೆ. ಸದ್ಯ ದುಬೈ ವಿಮಾನ ನಿಲ್ದಾಣ ಸ್ಥಗಿತಗೊಂಡಿರುವುದರಿಂದ ವಿಳಂಬವಾಗುತ್ತಿದೆ. ಎಂ.ಎಲ್.ಸಿ ಭೋಜೆಗೌಡ ಸೇರಿದಂತೆ ಅಲ್ಲಿ ಸಿಲುಕಿರುವ ಎಲ್ಲಾ ಕನ್ನಡಿಗರನ್ನು ಆದಷ್ಟು ಬೇಗ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಶ್ರಮಿಸಲಿದೆ” ಎಂದು ಅವರು ತಿಳಿಸಿದರು.

Tags:

error: Content is protected !!