ಪಕ್ಷ ಎಂದರೇ ಮನೆ ಇದ್ದಂತೆ, ಭಿನ್ನಾಭಿಪ್ರಾಯ ಸಹಜ, ಆದರೆ ಈಗ ನಮ್ಮ ಗುರಿ ಬೆಳಗಾವಿ ಜಿಲ್ಲಾ ಪಂಚಾಯಿತಿಯ ಮೇಲೆ ಕಾಂಗ್ರೆಸ್ ಧ್ವಜ ಹಾರಿಸುವುದೇ ಆಗಿರಬೇಕು. ಜಿಲ್ಲೆಯ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಹೊಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರು ಹೇಳಿದರು.


ಬೆಳಗಾವಿ ನಗರ ಮತ್ತು ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಕರ್ತರ ಸಭೆಯು ಯಶಸ್ವಿಯಾಗಿ ಜರುಗಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾದ ಮಾಜಿ ಸಚಿವ ವಿನಯಕುಮಾರ ಸೊರಕೆ ಅವರು ಕಾರ್ಯಕ್ರಮದ ನೇತೃತ್ವ ವಹಿಸಿ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ ಅವರು, ಕೇವಲ ಪಂಚ ಗ್ಯಾರಂಟಿಗಳಿಂದ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ. ಯುವ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಇದಕ್ಕಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರಿಗೆ ಹತ್ತಿರವಾಗಬೇಕು. ಪ್ರಸ್ತುತ ಪರಿಸ್ಥಿತಿಯನ್ನು ಯುವಜನರ ಗಮನಕ್ಕೆ ತರಬೇಕು. 2014 ರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಸಮಸ್ಯೆಗಳ ಬಗ್ಗೆ ಪ್ರಶ್ನಿಸಬೇಕಿದೆ ಎಂದರು. ಇನ್ನು ಕಾಂಗ್ರೆಸ್ ಹಿಂದೂ ಹಾಗೂ ಮುಸ್ಲಿಂ ಸೇರಿದಂತೆ ಎಲ್ಲರ ಪರವಾಗಿಯೂ ಇದೆ ಎಂಬ ಉತ್ತರವನ್ನು ಸಚಿವರುಗಳು ವಿರೋಧಪಕ್ಷದ ನಾಯಕರಿಗೆ ನೀಡಬೇಕು. ಶೀಘ್ರದಲ್ಲೇ ಸ್ಥಳೀಯ ಚುನಾವಣೆಗಳು ನಡೆಯಲಿವೆ. ಪಕ್ಷ ಎಂದರೇ ಮನೆಯಿದ್ದಂತೆ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಅವುಗಳನ್ನು ಮೀರಿ ಮನೆ ವಿಷಯದಲ್ಲಿ ಒಂದಾಗಬೇಕೆಂದು ಕರೆ ನೀಡಿದರು.
ಮುಂದುವರೆದು ಮಾತನಾಡಿದ ಅವರು ರಾಜ್ಯದಲ್ಲೇ 100 ಸದಸ್ಯರನ್ನು ಒಳಗೊಂಡ ಜಿಲ್ಲಾ ಪಂಚಾಯಿತಿಯನ್ನು ಬೆಳಗಾವಿ ಜಿಲ್ಲೆ ಹೊಂದಿದೆ. ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಬೆಳಗಾವಿ ಜಿಲ್ಲಾ ಪಂಚಾಯಿತಿಯ ಮೇಲೆ ಕಾಂಗ್ರೆಸ್ ಅಧಿಕಾರವನ್ನು ಹೊಂದುವ ಧ್ಯೇಯ ನಮ್ಮದಾಗಬೇಕು. ಬಿಜೆಪಿ ಪಕ್ಷವನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ಸಿನಲ್ಲಿದೆ. ಮುಂದಿನ ಚುನಾವಣೆಯಲ್ಲಿಯೂ ಗೆಲುವು ನಮ್ಮದೇ ಎಂದರು.
ಪ್ರಚಾರ ಸಮಿತಿ ಉಪಾಧ್ಯಕ್ಷ ಸುರೇಂದ್ರ ವಿ. ಅವರು ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದರು. ನಂತರ ಪಿಎಂ ಮೋದಿ ಅವರ ದೇಶದ ಪರ ನಡೆಯನ್ನು ಬಲವಾಗಿ ಟೀಕಿಸಿದರು.
ತಮ್ಮದೇ ಆದ ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಗ್ರಾಮೀಣ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ರಾಜಾ ಸಲೀಂ ಕಾಶಮ್ಮನವರ ಹಾಗೂ ನಗರ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಗಜು ಧರನಾಯಕ್ ಅವರು ಉಪಸ್ಥಿತರಿದ್ದರು.
