ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಐತಿಹಾಸಿಕ ಹೋಳಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ಬಣ್ಣದೋಕುಳಿಯಲ್ಲಿ ಯುವಪಡೆ ಹೇಗೆ ಮಿಂದೆದ್ದಿದ್ದಾರೆ.


ಬಾಗಲಕೋಟೆ ಜಿಲ್ಲೆಯಾದ್ಯಂತ ಐತಿಹಾಸಿಕ ಹೋಳಿ ಹಬ್ಬದ ಬಣ್ಣದೋಕುಳಿ ಇಂದಿನಿಂದ ಅದ್ಧೂರಿಯಾಗಿ ಆರಂಭಗೊಂಡಿದೆ. ಜಿಲ್ಲೆಯ ಬನಹಟ್ಟಿ ನಗರದ ಎಸ್.ಆರ್.ಎ. ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ರೇನ್ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸಾವಿರಾರು ಯುವಕ-ಯುವತಿಯರು ಪಾಲ್ಗೊಂಡು ಸಖತ್ ಸ್ಟೆಪ್ಸ್ ಹಾಕಿದರು. ಸಿದ್ದು ಕೊಣ್ಣೂರ ನೇತೃತ್ವದ ತಂಡವು ಈ ಬಣ್ಣದ ಸಂಭ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಬಣ್ಣದಾಟದ ವ್ಯವಸ್ಥೆ ಮಾಡುವ ಮೂಲಕ ಸಾಂಪ್ರದಾಯಿಕ ಮತ್ತು ಆಧುನಿಕತೆಯ ಮಿಶ್ರಣದೊಂದಿಗೆ ಹಬ್ಬಕ್ಕೆ ಕಳೆ ನೀಡಲಾಯಿತು.
ಇನ್ನು ಬಾಗಲಕೋಟೆ ನಗರದಲ್ಲೂ ಹೋಳಿ ಹಬ್ಬದ ರಂಗು ಜೋರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಡಿಜೆ ಹಾಡುಗಳ ಅಬ್ಬರಕ್ಕೆ ಯುವ ಸಮೂಹ ಕುಣಿದು ಕುಪ್ಪಳಿಸುತ್ತಿದ್ದರೆ, ಇಡೀ ನಗರವೇ ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಿದೆ. ಒಟ್ಟಿನಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಐತಿಹಾಸಿಕ ಬಣ್ಣದೋಕುಳಿಗೆ ಜಿಲ್ಲೆಯ ಜನರು ಸಾಕ್ಷಿಯಾಗುತ್ತಿದ್ದು, ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ರಂಗಿನಾಟದಲ್ಲಿ ಮಿಂದೆದ್ದಿದ್ದಾರೆ.
