ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಾಗ್ಗೆ ಸದ್ದು ಮಾಡುತ್ತಾ ಬಂದಿದ್ದು, ಈ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಧಾರವಾಡ ಗ್ರಾಮೀಣ ಕೈ ಶಾಸಕ ವಿನಯ ಕುಲಕರ್ಣಿ ಕೈ ಮುಗಿದು ಈ ವಿಚಾರ ಹೈಕಮಾಂಡ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ- ಶಾಸಕ ವಿನಯ್ ಕುಲಕರ್ಣಿ ಹೇಳಿದರು.
ಧಾರವಾಡ ಜಿಲ್ಲೆಗೆ ವಿನಯ ಕುಲಕರ್ಣಿ ನಿರ್ಬಂಧ ಹಿನ್ನೆಲೆಯಲ್ಲಿ ಬೆಳಗಾವಿಯ ಕಿತ್ತೂರಿನಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಅಂತಿಮ. ಆ ಬಗ್ಗೆ ಪತ್ರಕರ್ತರೇ ಪ್ರಶ್ನೆ ಕೇಳುವುದನ್ನು ಬಿಡುತ್ತಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ನಮ್ಮ ನಾಯಕರು. ಡಿಕೆಶಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯನವರೂ ಕೆಲಸ ಮಾಡಿದ್ದಾರೆ. ಹೈಕಮಾಂಡ್ ಏನು ಹೇಳುತ್ತದೆಯೋ ಅವರಿಬ್ಬರೂ ಅದನ್ನು ಕೇಳುತ್ತಾರೆ ಎಂದರು. ಜತೆಗೆ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ಆಶೀರ್ವಾದ ಇದ್ದರೆ ನಾನೂ ಸಚಿವನಾಗುತ್ತೇನೆ ಎಂದು ಶಾಸಕ ವಿನಯ್ ಕುಲಕರ್ಣಿ ಅವರು ಸಚಿವರಾಗುವ ಇಂಗಿತ ವ್ಯಕ್ತಪಡಿಸಿದರು. ಹೈಕಮಾಂಡ್ ಆಶೀರ್ವಾದ ಇದ್ದರೆ ನಾನೂ ಕೂಡ ಸಚಿವನಾಗುತ್ತೇನೆ ಎಂದು ತಿಳಿಸಿದ ಅವರು, ಪದವೀಧರ ಕ್ಷೇತ್ರದ ಚುನಾವಣೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಅಸಮಾಧಾನ ಇಲ್ಲ.
ಬಸವರಾಜ್ ಗುರಿಕಾರ ಅವರು ಈ ಹಿಂದೆ ಶಿಕ್ಷಕ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದರು. ಈಗ ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಮೋಹನ ಲಿಂಬಿಕಾಯಿ ಯೋಗ್ಯ ಅಭ್ಯರ್ಥಿ. ಮೋಹನ ಲಿಂಬಿಕಾಯಿ ಈ ಹಿಂದೆ ಎಚ್.ಕೆ.ಪಾಟೀಲ ಅವರನ್ನು ಸೋಲಿಸಿದ್ದರು. ಹಿಂದೆ ನಾನೂ ಪಕ್ಷೇತರನಾಗಿ ಗೆದ್ದಿದ್ದೆ. ಕಾಂಗ್ರೆಸ್ ಸೇರಿದ ನಂತರ ಎಲ್ಲರೂ ನನ್ನ ಪರ ಚುನಾವಣೆ ಮಾಡಿದರು. ಈಗಲೂ ಹಳೆಯ ಮುಖಂಡರು ನನ್ನ ಪರ ಇದ್ದಾರೆ. ಪಕ್ಷೇತರ ನಿಂತಾಗ ಕಾಂಗ್ರೆಸ್ ಮುಖಂಡರು ನನ್ನ ವಿರುದ್ಧ ಚುನಾವಣೆ ಮಾಡಿದ್ದರು ಎಂದು ಹೇಳಿದರು. ಪದೇ ಪದೇ ಧಾರವಾಡದಲ್ಲಿ ಕಸಾಯಿಖಾನೆ ನಿಷೇಧ ವಿಚಾರಕ್ಕೆ ಮಾತನಾಡಿ, ಕೆಲವರು ಗೋಹತ್ಯೆ ಬಗ್ಗೆ ಮಾತನಾಡುತ್ತಾರೆ. ನಾನೂ ಕೂಡ ದೇಶಿ ಗೋವುಗಳನ್ನು ಸಾಕಿದ್ದೇನೆ. ಆದರೆ, ಅವುಗಳಿಗೆ ವಯಸ್ಸಾರೆ ಏನೂ ಮಾಡಲು ಆಗುವುದಿಲ್ಲ. ಈ ಹಿಂದೆ ಜಾನುವಾರುಗಳು ಸತ್ತರೆ ಅವುಗಳ ಚರ್ಮ ತೆಗೆಯುತ್ತಿದ್ದರು. ಆದರೆ, ಈಗ ರಸ್ತೆಯ ಮೇಲೆ ಎಸೆಯುತ್ತಿದ್ದಾರೆ. ಇದರಿಂದ ವಾತಾವರಣ ಕೆಡುತ್ತದೆ. ಫಿಟ್ನೆಸ್ ಇಲ್ಲದ ಜಾನುವಾರು ಮಾರಾಟ ಮಾಡಲು ಕೊಡಬೇಕು. ಇದನ್ನು ಸರ್ಕಾರ ಕೂಡ ವಿಚಾರ ಮಾಡಬೇಕು. ಕೆಲವು ಗೋವುಗಳು ಹಾಲು ಕೊಡುವುದಿಲ್ಲ. ಕೆಲವು ಕಾಲು ಮುರಿದುಕೊಂಡಿರುತ್ತವೆ. ಅಂತವುಗಳನ್ನು ಹೇಗೆ ಸಾಕಬೇಕು? ನಮ್ಮಲ್ಲಿ ಎಷ್ಟು ಗೋಶಾಲೆ ಇವೆ? ಗೋಶಾಲೆಗಳ ಬಗ್ಗೆ ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತದೆ? ಅದರ ಜವಾಬ್ದಾರಿ ನಿಭಾಯಿಸುವವರಾದರೂ ಯಾರು? ಎಂದು ವಿನಯ್ ಪ್ರಶ್ನಿಸಿದರು.
