ಬೆಳಗಾವಿ ಸಿಟಿಸ್ 2.0 ಯೋಜನೆಯ ವಿಳಂಬದ ಕುರಿತು ಬಿಜೆಪಿ ನೇತೃತ್ವದ ಬೆಳಗಾವಿ ಮಹಾನಗರ ಪಾಲಿಕೆ ನಡೆಸುತ್ತಿರುವ ದೋಷಾರೋಪಣೆ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನವಾಗಿದ್ದು, ತಮ್ಮ ಆಡಳಿತ ವೈಫಲ್ಯದಿಂದ ಗಮನ ತಿರುಗಿಸುವ ಪ್ರಯತ್ನವಾಗಿದೆ ಎಂದು ರಾಜಕುಮಾರ ಟೋಪಣ್ಣವರ ಆರೋಪಿಸಿದ್ದಾರೆ.
ಅಧಿಕೃತ ದಾಖಲೆಗಳ ಪ್ರಕಾರ ಬೆಳಗಾವಿ ಸ್ಮಾರ್ಟ್ ಸಿಟಿ ಸಂಸ್ಥೆಯು 2025ರ ಮೇ ತಿಂಗಳಲ್ಲೇ ಮಹಾನಗರ ಪಾಲಿಕೆಗೆ ಕಡ್ಡಾಯ 20% ಪಾಲಿನ ಅನುದಾನಕ್ಕೆ ಅನುಮೋದನೆ ನೀಡುವಂತೆ ಮನವಿ ಮಾಡಿತ್ತು. ನಂತರ 2025ರ ಅಕ್ಟೋಬರ್ ತಿಂಗಳಲ್ಲಿ ಜ್ಞಾಪನೆ ಕಳುಹಿಸಲಾಯಿತು ಹಾಗೂ 2025ರ ನವೆಂಬರ್ನಲ್ಲಿ ರಾಜ್ಯ ಸರ್ಕಾರದ ಗಮನಕ್ಕೆ ತರಲಾಯಿತು. ಆದಾಗ್ಯೂ ಮಹಾನಗರ ಪಾಲಿಕೆ ಸಮಯೋಚಿತ ನಿರ್ಧಾರ ಕೈಗೊಳ್ಳಲು ವಿಫಲವಾಯಿತು ಎಂದಿದ್ದಾರೆ.
ಇಂದಿಗೂ ಮಹಾನಗರ ಪಾಲಿಕೆ ಕಡ್ಡಾಯ 20% ಪಾಲಿನ ಅನುದಾನವನ್ನು ಜಮಾ ಮಾಡಿಲ್ಲ. ಸಿಟಿಸ್ 2.0 ಯೋಜನೆಗೆ ಅಗತ್ಯವಾದ ಭೂಮಿ ಅಂತಿಮಗೊಳಿಸಲಾಗಿಲ್ಲ. ಯೋಜನಾ ಘಟಕಗಳು ಪೂರ್ಣಗೊಳ್ಳಿಲ್ಲ. ಆರ್ಥಿಕ ಬದ್ಧತೆ ಮತ್ತು ಭೂಮಿ ಅಂತಿಮಗೊಳಿಸದೇ ಸ್ಮಾರ್ಟ್ ಸಿಟಿ ಸಂಪೂರ್ಣ ಯೋಜನೆಯನ್ನು ಸಲ್ಲಿಸುವುದು ಸಾಧ್ಯವಿಲ್ಲ.
ಈ ವಾಸ್ತವಿಕತೆಯನ್ನು ಒಪ್ಪಿಕೊಳ್ಳುವ ಬದಲು ಬಿಜೆಪಿ ಪಾಲಿಕೆ ಇದೀಗ ಸ್ಮಾರ್ಟ್ ಸಿಟಿ ಅಧಿಕಾರಿಗಳ ಮೇಲೆ ದೋಷಾರೋಪ ಹೊರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನಷ್ಟು ಆತಂಕಕಾರಿ ವಿಷಯವೆಂದರೆ ಬಿಜೆಪಿ ಮಹಾ ಮಾರ್ಗದರ್ಶಕರು ವಿಧಾನಸಭೆಯಲ್ಲಿ ಎಲ್ ಆ್ಯಂಡ್ ಟಿ ಸಂಸ್ಥೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದು. ಇದು ಮಹಾನಗರ ಪಾಲಿಕೆಯ ಆಡಳಿತ ವೈಫಲ್ಯದಿಂದ ಜನರ ಗಮನ ತಿರುಗಿಸಲು ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದ ಜನರನ್ನು ತಪ್ಪು ದಾರಿಗೆಳೆಯಲು ನಡೆಸುತ್ತಿರುವ ದಿಕ್ಕುತಪ್ಪಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
20% ಅನುದಾನ ಜಮಾ ಮಾಡಲು ವಿಫಲವಾಗಿರುವ ಬೆಳಗಾವಿ ಪಾಲಿಕೆ ಅಗತ್ಯ ಭೂಮಿ ಅಂತಿಮಗೊಳಿಸಲು
ಸಮಯೋಚಿತ ಆಡಳಿತಾತ್ಮಕ ನಿರ್ಧಾರಗಳ ಕೊರತೆ
ಆಡಳಿತ ವೈಫಲ್ಯ ಮತ್ತು ದೋಷಾರೋಪಣಾ ರಾಜಕೀಯದಿಂದ ಬೆಳಗಾವಿ ಮಹತ್ವದ ನಗರ ಪರಿವರ್ತನಾ ಯೋಜನೆಯನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ ಎಂದಿದ್ದಾರೆ.
ಬಿಜೆಪಿ ನೇತೃತ್ವದ ಮಹಾನಗರ ಪಾಲಿಕೆ ತಕ್ಷಣ 20% ಅನುದಾನ ಜಮಾ ಮಾಡಿ, ಭೂಮಿ ಅಂತಿಮಗೊಳಿಸಬೇಕು. ಸ್ಮಾರ್ಟ್ ಸಿಟಿಯೊಂದಿಗೆ ಸಮನ್ವಯ ಸಾಧಿಸಬೇಕು. ಯೋಜನೆಯನ್ನು ತಡವಿಲ್ಲದೆ ಸಲ್ಲಿಸಬೇಕು. ಬೆಳಗಾವಿ ಜನತೆಗೆ ದಿಕ್ಕುತಪ್ಪಿಸುವ ರಾಜಕೀಯವಲ್ಲ, ಅಭಿವೃದ್ಧಿ ಬೇಕಾಗಿದೆ ಎಂದು ಪ್ರಕಟಣೆಯಲ್ಲಿ ಟೋಪಣ್ಣವರ ತಿಳಿಸಿದ್ದಾರೆ.
