BELAGAVI

ರಂಗಪಂಚಮಿ ದಿನ ಬೆಳಗಾವಿಯ ಪಾಂಗುಳ್ ಗಲ್ಲಿ ‘ಉರುಳು ಸೇವೆ’ ಸಮಯದಲ್ಲಿ ಬದಲಾವಣೆ

Share

ಬೆಳಗಾವಿಯ ಐತಿಹಾಸಿಕ ಪಾಂಗುಳ್ ಗಲ್ಲಿಯ ಅಶ್ವತ್ಥಾಮ ದೇವಸ್ಥಾನದಲ್ಲಿ ನಾಳೆ ರಂಗಪಂಚಮಿ ನಿಮಿತ್ತ ವಿಶೇಷ ಉರುಳು ಸೇವೆ ನಡೆಯಲಿದೆ. ಗ್ರಹಣದ ಹಿನ್ನೆಲೆಯಲ್ಲಿ ಈ ಬಾರಿ ಪೂಜಾ ಮತ್ತು ಸೇವಾ ಕಾರ್ಯಕ್ರಮಗಳ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಭಕ್ತಾದಿಗಳು ಈ ಬಗ್ಗೆ ಗಮನಹರಿಸುವಂತೆ ಪಂಚ ಕಮಿಟಿ ಮನವಿ ಮಾಡಿದೆ.

ಮಂಗಳವಾರ ನಡೆಯಲಿರುವ ರಂಗಪಂಚಮಿ ಕಾರ್ಯಕ್ರಮದ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪಾಂಗುಳ್ ಗಲ್ಲಿ ಪಂಚ ಕಮಿಟಿಯ ಸತೀಶ್ ಅನಗೋಳ್ಕರ್ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ದೇಶದ ಅತ್ಯಂತ ಅಪರೂಪದ ಅಶ್ವತ್ಥಾಮ ಮಂದಿರಗಳಲ್ಲಿ ಒಂದಾದ ಇಲ್ಲಿ ಪ್ರತಿವರ್ಷ ಸಾವಿರಾರು ಭಕ್ತರು ಉರುಳು ಸೇವೆ ಸಲ್ಲಿಸುತ್ತಾರೆ. ಈ ಬಾರಿ ಗ್ರಹಣ ಇರುವುದರಿಂದ ಕಾರ್ಯಕ್ರಮಗಳ ಗೊಂದಲ ನಿವಾರಿಸಲು ಸಭೆಯಲ್ಲಿ ಚರ್ಚಿಸಲಾಗಿದ್ದು, ಅಂತಿಮ ನಿರ್ಣಯದಂತೆ ಮಂಗಳವಾರ ಬೆಳಿಗ್ಗೆ 8:30 ರಿಂದ 10:30 ರ ಅವಧಿಯಲ್ಲಿ ಉರುಳು ಸೇವಾ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಸಮಿತಿಯ ಪ್ರಮುಖರಾದ ಅನಂತ್ ಕುಚ್ಚೆಕರ್, “ದಕ್ಷಿಣ ಭಾರತದ ಹೆಮ್ಮೆಯ ಈ ಮಂದಿರದಲ್ಲಿ ಭಕ್ತರ ಶ್ರದ್ಧೆಗೆ ಭಂಗ ಬರದಂತೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಉರುಳು ಸೇವೆ ಮುಗಿದ ನಂತರ, ಸಂಜೆ ಗ್ರಹಣ ಕಾಲ ಮುಕ್ತಾಯವಾದ ಮೇಲೆ ಅಂದರೆ ರಾತ್ರಿ 7 ಗಂಟೆಗೆ ಸರಿಯಾಗಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ” ಎಂದು ತಿಳಿಸಿದರು. ಸಾರ್ವಜನಿಕರು ಮತ್ತು ಭಕ್ತಾದಿಗಳು ಈ ಸಮಯದ ಬದಲಾವಣೆಯನ್ನು ಗಮನಿಸಿ, ಶಾಂತಿಯುತವಾಗಿ ಹಬ್ಬ ಆಚರಿಸಲು ಸಹಕರಿಸಬೇಕೆಂದು ಸಮಿತಿ ವಿನಂತಿಸಿದೆ.

Tags:

error: Content is protected !!