BELAGAVI

ಶತಾಯುಷಿ ವೈದ್ಯೆಯ ಮಹಾತ್ಯಾಗ: ಸಾವಿನಲ್ಲೂ ಸಾರ್ಥಕತೆ ಮೆರೆದ ಡಾ. ಸುಶೀಲಾದೇವಿ ರಾಮಣ್ಣವರ ಕಂಕಣವಾಡಿ ಆರ್ಯುವೇದ ಮಹಾವಿದ್ಯಾಲಯಕ್ಕೆ ದೇಹದಾನ ಮಾಡಿದ ಮಹಾತಾಯಿ…

Share

ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಹಿರಿಯ ಆಯುರ್ವೇದ ವೈದ್ಯೆ, ಶತಾಯುಷಿ ಡಾ. ಸುಶೀಲಾದೇವಿ ಬಸವಣ್ಣಪ್ಪ ರಾಮಣ್ಣವರ ಅವರು ಇಂದು ನಿಧನರಾಗಿದ್ದಾರೆ. ತಮ್ಮ ಜೀವಿತಾವಧಿಯಲ್ಲೇ ದೇಹದಾನದ ಬಗ್ಗೆ ಜಾಗೃತಿ ಮೂಡಿಸಿದ್ದ ಇವರು, ಇಂದು ತಮ್ಮ ದೇಹವನ್ನೇ ವೈದ್ಯಕೀಯ ಸಂಶೋಧನೆಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಬೈಲಹೊಂಗಲದ ಬಸವನಗರದ ನಿವಾಸಿ ಹಾಗೂ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ 101 ವರ್ಷದ ಡಾ. ಸುಶೀಲಾದೇವಿ ರಾಮಣ್ಣವರ ಅವರು ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ. ಬಿ.ಎಸ್. ರಾಮಣ್ಣವರ ಅವರ ಧರ್ಮಪತ್ನಿಯಾಗಿದ್ದ ಇವರು, ಆಯುರ್ವೇದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು. 18 ವರ್ಷಗಳ ಹಿಂದೆ ತಮ್ಮ ಪತಿಯ ದೇಹವನ್ನೇ ದಾನ ಮಾಡುವ ಮೂಲಕ ಹೊಸ ಇತಿಹಾಸ ಬರೆದಿದ್ದ ಸುಶೀಲಾದೇವಿ ಅವರು, ಇಂದು ತಮ್ಮ ಅಂತಿಮ ಇಚ್ಛೆಯಂತೆ ತಮ್ಮ ದೇಹವನ್ನು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯಕ್ಕೆ ದಾನವಾಗಿ ನೀಡಿದ್ದಾರೆ.

ತಮ್ಮ ಮಗ ಡಾ. ಮಹಾಂತೇಶ್ ರಾಮಣ್ಣವರ ಅವರೊಂದಿಗೆ ಸೇರಿ ರಾಜ್ಯಾದ್ಯಂತ ನೇತ್ರದಾನ, ಅಂಗಾಂಗ ದಾನ ಮತ್ತು ದೇಹದಾನದ ಕುರಿತು ಜನರಲ್ಲಿ ಮನೆಮಾಡಿದ್ದ ಮೂಢನಂಬಿಕೆಗಳನ್ನು ಹೋಗಲಾಡಿಸಲು ಇವರು ಶ್ರಮಿಸಿದ್ದರು. ಡಾ. ಸುಶೀಲಾದೇವಿ ಅವರ ನಿಧನಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ, ಶಾಸಕ ಮಹಾಂತೇಶ್ ಕೌಜಲಗಿ ಸೇರಿದಂತೆ ನಾಡಿನ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.
ಸುಶೀಲಾದೇವಿ ಅವರ ಪಾರ್ಥಿವಕ್ಕೆ ಬೈಲಹೊಂಗಲದ ಮೂರು ಸಾವಿರು ಮಠದ ಶ್ರೀಗಳು ಉಪಸ್ಥಿತಿಯಲ್ಲಿ ಅಂತಿಮ ನಮನ ಸಲ್ಲಿಸಿ ಮನೆಯಿಂದ ಪಾರ್ಥಿವದ ಮೆರವಣಿಗೆ ನಡೆಸಲಾಯಿತು. ಇದರಲ್ಲಿ ಕೆ.ಎಲ್.ಇ ಶ್ರೀ ಬಿ.ಎಂ. ಕಂಕಣವಾಡಿ ಆರ್ಯುವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗಿಯಾಗಿ, ದೇಹದಾನ, ಅಂಗಾಂಗ ದಾನ ಮತ್ತು ರಕ್ತದಾನದ ಮಹತ್ವವನ್ನು ಅಂತ್ಯಯಾತ್ರೆಯಲ್ಲಿಯೂ ಸಾರಿದರು. ಕೆಲ ಕಾಲ ರಾಣಿ ಚೆನ್ನಮ್ಮ ವೃತ್ತದಲ್ಲಿ ಅಂತ್ಯದರ್ಶನಕ್ಕೆ ಪಾರ್ಥಿವವನ್ನು ಇರಿಸಲಾಗಿತ್ತು.

 

ಮೆರವಣಿಗೆಯ ಮೂಲಕ ಬೆಳಗಾವಿಯ ಶಹಾಪುರದಲ್ಲಿರುವ ಕೆ.ಎಲ್.ಎಸ್. ಶ್ರೀ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯಕ್ಕೆ ಸುಶೀಲಾದೇವಿ ರಾಮನ್ನವರ ಅವರ ಪಾರ್ಥಿವವನ್ನು ತರಲಾಯಿತು. ಇಲ್ಲಿ ಹಲವಾರು ಗಣ್ಯರು ಮಾಲಾರ್ಪಣೆ ಮಾಡಿದರು. ಧನ್ವಂತರಿ ಮಂತ್ರದೊಂದಿಗೆ ಸುಶೀಲಾದೇವಿ ಅವರ ದೇಹದಾನವನ್ನು ಕೆ.ಎಲ್.ಎಸ್. ಶ್ರೀ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯವು ಸ್ವೀಕರಿಸಿತು.

ಸುಶೀಲಾದೇವಿ ಬಸವಣೆಪ್ಪ ರಾಮನ್ನವರು ದೇಹದಾನಕ್ಕೆ ಸಂಬಂಧಿಸಿದ ಮೂಢನಂಬಿಕೆಯನ್ನು ಹೋಗಲಾಡಿಸಿ, ಜನರಲ್ಲಿ ದೇಹದಾನದ ಮಹತ್ವವನ್ನು ತಿಳಿಸಿ ಜಾಗೃತಿ ನಿರ್ಮಿಸಲು ಡಾ. ರಾಮನ್ನವರ ಚಾರಿಟೇಬಲ್ ಟ್ರಸ್ಟ ಹುಟ್ಟು ಹಾಕಿದವರು. ಮನೆಯಿಂದಲೇ ದೇಹದಾನದ ಪ್ರಕ್ರಿಯೆ ಆರಂಭಗೊಂಡಿತು. ತಂದೆ, ತಾಯಿ ಸಹೋದರರು ಎಲ್ಲರೂ ದೇಹದಾಹವನ್ನು ಮಾಡಲಾಗಿದೆ. ತಂದೆ ಬಸವಣೆಪ್ಪ ರಾಮನ್ನವರ ಕೂಡ ತಮ್ಮ ಮರಣೋತ್ತರ ದೇಹದಾನದ ಬಳಿಕ ಪುತ್ರ ಡಾ. ಮಹಾಂತೇಶ್ ರಾಮಣ್ಣವರ ಸ್ವತಃ ತಂದೆಯ ದೇಹವನ್ನು ಛೇಧಿಸಬೇಕೆಂದು ಉಯಿಲು ಬರೆದಿದ್ದರು. ಅದನ್ನು ಡಾ. ಮಹಾಂತೇಶ್ ರಾಮಣ್ಣವರ ಪೂರ್ಣಗೊಳಿಸಿದರು. ಈಗ ತಾಯಿ ಡಾ. ಸುಶೀಲಾದೇವಿ ಅವರು ಕೂಡ ಅದೇ ಇಚ್ಛೆಯನ್ನು ಪ್ರಕಟಿಸಿದ್ದಾರೆ. ಎರಡು ಕಣ್ಣುಗಳನ್ನು ದಾನ ಮಾಡಿ ಇಬ್ಬರ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಚರ್ಮವನ್ನು ಕೂಡ ದಾನ ಮಾಡಲಾಗಿದ್ದು, ಇಂದು ಅವರ ದೇಹವನ್ನು ದಾನ ಮಾಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ಜನರು ದೇಹದಾನವನ್ನು ಮಾಡಿದ್ದು, 5 ಸಾವಿರ ಜನರು ದೇಹದಾನಕ್ಕೆ ವಾಗ್ಧಾನವನ್ನು ಹಾಕಿದ್ದಾರೆ ಎಂದು ಡಾ. ಮಹಾಂತೇಶ್ ರಾಮನ್ನವರ ಹೇಳಿದರು.

ಮಾಜಿ ಮಹಾಪೌರ ವಿಜಯ್ ಮೋರೆ ಅವರು ಡಾ. ರಾಮನ್ನವರ ಕುಟುಂಬದ ಕಾರ್ಯ ನಿಜಕ್ಕೂ ಶ್ಲಾಘನೀಯ. ಮರಣಾನಂತರವೂ ದೇಶದಲ್ಲೇ ಮೊದಲೂ ಜಾಗೃತಿ ಮೂಡಿಸುವ ಮಹತ್ತರ ಕಾರ್ಯವನ್ನು ಡಾ. ಮಹಾಂತೇಶ್ ರಾಮನ್ನವರ ಅವರು ಮಾಡುತ್ತಿದ್ದಾರೆ. ಡಾ. ರಾಮನ್ನವರ ಅವರ ಕಾರ್ಯ ಇನ್ನುಳಿದ ವೈದ್ಯರಿಗೂ ಪ್ರೇರಣೆಯಾಗಲಿ ಎಂದರು.

ತಂದೆ-ತಾಯಿ ಇಬ್ಬರೂ ವೈದ್ಯರಾಗಿದ್ದರು. ಸ್ವತಃ ತಮ್ಮ ದೇಹದಾನವನ್ನು ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದು, ಸಹೋದರ ಡಾ. ಮಹಾಂತೇಶ್ ರಾಮನ್ನವರ ಕೂಡ ಈ ಕಾರ್ಯವನ್ನು ಮುಂದುವರೆಸಿದ್ದಾರೆ. 2008 ತಂದೆ ಬಸವಣೆಪ್ಪ ಅವರ ದೇಹವನ್ನು ಛೇದಿಸಿ ವೈದ್ಯಕೀಯ ಶಿಕ್ಷಣವನ್ನು ನೀಡಿದ ಮಹಾಂತೇಶ್ ರಾಮನ್ನವರ, ಈಗ ತನ್ನ ದೇಹವನ್ನು ಕೂಡ ಅದೇ ರೀತಿ ಛೇದಿಸಿ ಶಿಕ್ಷಣ ನೀಡಬೇಕೆಂದು ನಮ್ಮ ತಾಯಿ ಹೇಳಿದ್ದು, ಅದನ್ನ ಸಹೋದರ ಪಾಲಿಸಲಿ ಎಂದು ಡಾ. ಸುಶೀಲಾದೇವಿ ಅವರ ಪುತ್ರಿ, ವಿಜಯಲಕ್ಷ್ಮೀ ಮಂದವಾಡಿ ಅವರು ಹೇಳಿದರು.

ತಂದೆಯ ದೇಹವನ್ನು ಮರಣಾನಂತರ ಛೇದಿಸಿ ಮಕ್ಕಳಿಗೆ ಪಾಠ ಮಾಡಿದ ಡಾ. ರಾಮನ್ನವರ ಮೊದಲಿಗರು. ಈಗ ತಾಯಿಯ ಇಚ್ಛೆಯೂ ಅದೇ ಆಗಿದ್ದು, ಅದನ್ನ ಪೂರ್ಣಗೊಳಿಸಲು ಅವರ ಕುಟುಂಬ ಅವರಿಗೆ ಬೆಂಬಲವಾಗಿ ನಿಂತಿದೆ.

Tags:

error: Content is protected !!