ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದ್ದರೂ ಕಾಂಗ್ರೆಸ್ನಲ್ಲಿ ಟಿಕೆಟ್ ಹಂಚಿಕೆ ವಿಳಂಬವಾಗುತ್ತಿರುವುದಕ್ಕೆ ಯಾವುದೇ ಸಂಕಷ್ಟವಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆ ಕ್ಷೇತ್ರದಲ್ಲಿ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಅವರ ಕುಟುಂಬಕ್ಕೆ ಟಿಕೆಟ್ ನೀಡಬೇಕೆಂಬ ಸಹಜ ಒತ್ತಾಯ ಕೇಳಿಬಂದಿದೆ. ಆದರೆ, ಅಲ್ಲಿ ಅಲ್ಪಸಂಖ್ಯಾತ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಆ ಸಮುದಾಯದ ನಾಯಕರು ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗೆಲುವಿನ ಸಾಧ್ಯತೆಗಳನ್ನು ಪರಿಗಣಿಸಿ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.
ಇನ್ನು ಬಾಗಲಕೋಟೆ ಕ್ಷೇತ್ರದ ಬಗ್ಗೆ ಮಾತನಾಡಿದ ಅವರು, ಅಲ್ಲಿನ ನಾಯಕ ಮೇಟಿ ಅವರ ನಿಧನದ ಬಳಿಕ ಅವರ ಪುತ್ರನಿಗೆ ಟಿಕೆಟ್ ನೀಡಬೇಕೆಂಬ ಆಗ್ರಹವಿದೆ. ಆದರೆ ದಶಕಗಳಿಂದ ಪಕ್ಷಕ್ಕಾಗಿ ದುಡಿದ ಇತರ ಆಕಾಂಕ್ಷಿಗಳು ಕೂಡ ಅಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬಾಗಲಕೋಟೆಯಲ್ಲಿ ಒಂದು ಕುಟುಂಬಕ್ಕೆ ಆದ್ಯತೆ ನೀಡಿ, ದಾವಣಗೆರೆಯಲ್ಲಿ ಮತ್ತೊಂದು ಕುಟುಂಬಕ್ಕೆ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇವಲ ಕುಟುಂಬದ ಆಧಾರದ ಮೇಲೆ ಟಿಕೆಟ್ ನೀಡುವುದಿಲ್ಲ; ಬದಲಿಗೆ ಕ್ಷೇತ್ರವಾರು ಸರ್ವೇ ವರದಿ ಮತ್ತು ಗೆಲ್ಲುವ ಸಾಮರ್ಥ್ಯವನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
