ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ವಿರುದ್ಧ ಬಿಜೆಪಿ ನಾಯಕರು ವಿಧಾನಸೌಧದ ಗ್ರಾಂಡ್ ಸ್ಟೆಪ್ ಎದುರು ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು. ಬಜೆಟ್ ಭಾಷಣ ಮುಕ್ತಾಯವಾಗುತ್ತಿದ್ದಂತೆ ಬಿಜೆಪಿ ಶಾಸಕರು ವಿಧಾನಸೌಧದ ಪೂರ್ವ ದ್ವಾರದಿಂದ ಪಶ್ವಿಮ ದ್ವಾರದವರೆಗೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಅಭಿವೃದ್ಧಿ ಶೂನ್ಯ ಜನವಿರೋಧಿ ಬಜೆಟ್ ಇದು. ಹಣಕಾಸು ಇಲಾಖೆ ಕಳೆದ ಬಜೆಟ್ನಲ್ಲಿ ಘೋಷಣೆ ಮಾಡಿದ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ರಾಜ್ಯದ ಪರಿಸ್ಥಿತಿಯನ್ನು ಪಾತಾಳಕ್ಕೆ ತಂದಿಟ್ಟಿದ್ದಾರೆ. ತರಕಾರಿ ಮಾರುವ ಸಾಮಾನ್ಯ ಮನುಷ್ಯನೂ ಸಾಲ ಮಾಡಿ ಮನೆ ನಡೆಸುತ್ತಾನೆ. ಸಾಲ ಮಾಡಿ ಸರ್ಕಾರ ನಡೆಸುವುದಕ್ಕೆ ನೀವೇ ಬೇಕಾ ಸಿದ್ದರಾಮಯ್ಯನವರೇ? ಸಾಲದ ಸಿದ್ದರಾಮಯ್ಯ ಆಗಿದ್ದಾರೆ. ಕಾಂಗ್ರೆಸ್ ಎಂಎಲ್ಎಗಳಿಗೂ ತೃಪ್ತಿ ತಾರದ ಬಜೆಟ್ ಇದು. ನೀರಾವರಿ ಖಾತೆಯಲ್ಲಿ ಡಿಕೆಶಿ ಇದ್ದಾರೆ ಅಂತಾ ಕಡಿಮೆ ಹಣ ಇಟ್ಟಿದ್ದಾರೆ. ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದ ಪರಿಸ್ಥಿತಿ ಹಾಳು ಮಾಡಿದವರು. ಹೀಗಾಗಿ, ಚೊಂಬಿನ ಪ್ರತಿಭಟನೆ ಮಾಡಿದ್ದೇವೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ದಾಖಲೆ ಬಜೆಟ್ ಎಂದು ಬೀಗುತ್ತಿದ್ದ ಸಿಎಂ ಜನತೆಗೆ ದ್ರೋಹ ಮಾಡಿದ್ದಾರೆ. ಯಾರೋ ಸಾಹಿತಿಗಳು ಬರೆದುಕೊಟ್ಟಂತಿದೆ. ಸಿಎಂಗೆ ಕೇಳೋಕೆ, ಓದೋಕೆ ಮಾತ್ರ ಚೆನ್ನಾಗಿತ್ತು. ಆದರೆ ರಾಜ್ಯಕ್ಕೆ ಯಾವುದೇ ಪ್ರಯೋಜನ ಇಲ್ಲ. ದೊಡ್ಡ ಚೊಂಬು ನೀಡಿದ್ದಾರೆ. ಕಳೆದ ಬಾರಿ 1.16 ಲಕ್ಷ ಕೋಟಿ ಸಾಲ ಮಾಡಿದ್ದರು. ಈ ಸಲ 1.32 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಿದ್ದರಾಮಯ್ಯ 4.39 ಕೋಟಿ ರೂ. ಸಾಲ ಮಾಡಿದ್ದಾರೆ, ಇದೇ ದಾಖಲೆ. ದೂರದೃಷ್ಟಿಯಿಲ್ಲದ ನೀರಸ ಬಜೆಟ್ ಎಂದರು.
ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಇನ್ನುಳಿದ ಬಿಜೆಪಿ ಸದಸ್ಯರು ಭಾಗಿಯಾಗಿದ್ಧರು.
