BELAGAVI

ಬೆಳಗಾವಿಯಲ್ಲಿ ಭೀಮ್ ಆರ್ಮಿ ಏಕತಾ ಮಿಷನ್ ಲೋಕಾರ್ಪಣೆ; ನೂತನ ಪದಾಧಿಕಾರಿಗಳ ಪದಗ್ರಹಣ…

Share

ಕುಂದಾನಗರಿ ಬೆಳಗಾವಿಯಲ್ಲಿ ಇಂದು ಭೀಮ್ ಆರ್ಮಿ ಏಕತಾ ಮಿಷನ್ ಸಂಘಟನೆಯ ಕರ್ನಾಟಕ ರಾಜ್ಯ ಘಟಕದ ಲೋಕಾರ್ಪಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವದಡಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗಾಗಿ ಶ್ರಮಿಸುವುದಾಗಿ ಸಂಘಟನೆ ಘೋಷಿಸಿದೆ.

ಬೆಳಗಾವಿಯಲ್ಲಿ ಇಂದು ನಡೆದ ಭೀಮ್ ಆರ್ಮಿ ಏಕತಾ ಮಿಷನ್‌ನ ಕರ್ನಾಟಕ ರಾಜ್ಯ ಘಟಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಸಂಘಟನೆಯ ರಾಜ್ಯ ಗೌರವಾಧ್ಯಕ್ಷರಾಗಿ ತುಕಾರಾಂ ಎಸ್. ಕಾಂಬಳೆ, ರಾಜ್ಯಾಧ್ಯಕ್ಷರಾಗಿ ಸಂತೋಷ್ ಎಸ್. ಕೆಂಪ್ ಅಧಿಕಾರ ವಹಿಸಿಕೊಂಡರು. ಇವರೊಂದಿಗೆ ಉಪಾಧ್ಯಕ್ಷರಾಗಿ ದೀಪಕ್ ಎಲ್. ಆದಿವಾಸಿ, ಪ್ರಧಾನ ಕಾರ್ಯದರ್ಶಿಯಾಗಿ ಅಜಯಕುಮಾರ್ ಪೆ. ಆದಿಆಂದ್ರಾ ಹಾಗೂ ಕಾರ್ಯಾಧ್ಯಕ್ಷರಾಗಿ ಅಶೋಕ್ ಎಫ್. ಕೋಲಕಾರ ಅವರು ಜವಾಬ್ದಾರಿ ಸ್ವೀಕರಿಸಿದರು.

ಪದಗ್ರಹಣದ ಬಳಿಕ ಮಾತನಾಡಿದ ನೂತನ ಪದಾಧಿಕಾರಿಗಳು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ‘ಶಿಕ್ಷಣ, ಸಂಘಟನೆ ಮತ್ತು ಹೋರಾಟ’ ಎಂಬ ಮೂಲಮಂತ್ರದಡಿ ಸಂಘಟನೆಯು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ಸಮಾಜದ ಶೋಷಿತ ವರ್ಗಗಳ ಹಿತರಕ್ಷಣೆ ಮತ್ತು ದಲಿತರ ಧ್ವನಿಯಾಗಿ ಭೀಮ್ ಆರ್ಮಿ ಏಕತಾ ಮಿಷನ್ ರಾಜ್ಯಾದ್ಯಂತ ಬಲವಾಗಿ ಹೊರಹೊಮ್ಮಲಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ರಾಜಿಯಾಗದ ಹೋರಾಟ ನಡೆಸುವುದಾಗಿ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವ ಸಂಕಲ್ಪ ಮಾಡಿರುವ ಈ ನೂತನ ತಂಡವು, ಶೋಷಿತ ಸಮುದಾಯಗಳಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಸವಲತ್ತುಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ. ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಭೀಮ್ ಆರ್ಮಿ ಏಕತಾ ಮಿಷನ್ ಒಂದು ಪ್ರಬಲ ಶಕ್ತಿಯಾಗಿ ಬೆಳೆಯಲಿದೆ ಎಂದು ಸಂಘಟನೆಯ ನಾಯಕರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

Tags:

error: Content is protected !!