Belagavi

ಬೆಳಗಾವಿಯಲ್ಲಿ ಬೃಹತ್ ಉದ್ಯೋಗ ಮೇಳದ ಸಂಭ್ರಮ: 104 ಕಂಪನಿಗಳಿಂದ 19 ಸಾವಿರ ಉದ್ಯೋಗಾವಕಾಶ, ಸಾವಿರಾರು ಅಭ್ಯರ್ಥಿಗಳ ಭಾಗಿ

Share

• ಬೆಳಗಾವಿಯಲ್ಲಿ ಬೃಹತ್ ಜಿಲ್ಲಾ ಮಟ್ಟದ ಉದ್ಯೋಗ ಮೇಳ
• 19 ಸಾವಿರ ಹುದ್ದೆಗಳಿಗೆ ನಡೆಯಿತು ನೇರ ಸಂದರ್ಶನ
• ಬೆಳಗಾವಿಯಲ್ಲಿ ಶೀಘ್ರವೇ ತಲೆ ಎತ್ತಲಿದೆ ಐಟಿ ಪಾರ್ಕ್
• 104 ಕಂಪನಿಗಳು ಭಾಗಿ, ಅಭ್ಯರ್ಥಿಗಳಲ್ಲಿ ಹರ್ಷ

ಬೆಳಗಾವಿಯ ಎಸ್.ಜಿ. ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ಉದ್ಯೋಗಾಕಾಂಕ್ಷಿಗಳ ದಂಡೇ ನೆರೆದಿತ್ತು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 100ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದು, ನಿರುದ್ಯೋಗಿ ಯುವಕರಿಗೆ ಆಶಾಕಿರಣವಾಗಿ ಪರಿಣಮಿಸಿದೆ.

ಬೆಳಗಾವಿಯ ಶಿವಬಸವ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಜಿಲ್ಲಾಮಟ್ಟದ ಬೃಹತ್ ಉದ್ಯೋಗ ಮೇಳವು ಯಶಸ್ವಿಯಾಗಿ ಜರುಗಿತು. ವೇದಿಕೆಯ ಮೇಲೆ ಬಿ.ಆರ್. ಪಟಗುಂದಿ, ರವಿ ಬಂಗಾರಪ್ಪ, ಪ್ರಕಾಶ್ ದೇಶಪಾಂಡೆ, ಚಿದಾನಂದ, ಯಶವಂತ ಭಾಗ್ಯಶ್ರೀ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಸಾನಿಧ್ಯ ವಹಿಸಿ ಮಾತನಾಡಿದ ನಾಗನೂರು ರುದ್ರಾಕ್ಷಿಮಠದ ಶ್ರೀ ಅಲ್ಲಮಪ್ರಭು ಸ್ವಾಮಿಜೀ ಅವರು ಎಲ್ಲರೂ ಕೂಡ ಉದ್ಯೋಗಿಗಳಾಗಿ, ಬೇರೆಯವರಿಗೆ ಉದ್ಯೋಗ ನೀಡುವಂತಾಗಬೇಕು ಎಂಬುದು ಎಲ್ಲರ ಉದ್ಧೇಶವಾಗಿದೆ. ಉದ್ಯೋಗಮೇಳದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಿಕ್ಕ ಉದ್ಯೋಗವನ್ನು ಶ್ರದ್ಧೆಯಿಂದ ಸಲ್ಲಿಸಬೇಕು. ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಪೂರ್ಣಗೊಳಿಸಿದರೇ, ಭವಿಷ್ಯದಲ್ಲಿ ಹಲವಾರು ಸಂಸ್ಥೆಗಳನ್ನು ಕಟ್ಟಬಹುದು ಎಂದರು. ಉದ್ಯೋಗಗಳಿಗೂ ಮತ್ತು ಸಂಸ್ಥೆಗಳಿಗೂ ಕೊರತೆಯಿಲ್ಲ. ಉದ್ಯೋಗಾಕಾಂಕ್ಷಿಗಳು ಉದ್ಯೋಗಪಡೆದು ಸೇವೆ ಸಲ್ಲಿಸಿದಾಗ ಉದ್ಯೋಗಮೇಳಗಳು ಫಲಕಾರಿಯಾಗುತ್ತವೆ ಎಂದರು.

ಉತ್ತರ ಶಾಸಕ ಆಸೀಫ್ ಸೇಠ್ ಅವರು, ಉದ್ಯೋಗಮೇಳಗಳು ಕೇವಲ ಒಂದು ದಿನದಲ್ಲಿ ಉದ್ಯೋಗಾಕಾಂಕ್ಷಿಗಳ ಭವಿಷ್ಯವನ್ನು ಬದಲಾಯಿಸುತ್ತವೆ. ವಿವಿಧ ಕಂಪನಿ ಸಂಸ್ಥೆಗಳು ಆಯೋಜಿಸುವ ಉದ್ಯೋಗಮೇಳಗಳು ಹಲವು ಕುಟುಂಬಗಳ ಸ್ಥಿತಿಯನ್ನು ಮತ್ತು ಸಮಾಜದ ಸ್ಥಿತಿಯನ್ನು ಬದಲಾಯಿಸಲು ಪೂರಕವಾಗಿದೆ ಎಂದು ಹೇಳುತ್ತ ಆಯೋಜನಕರ ಕಾರ್ಯವನ್ನು ಶ್ಲಾಘಿಸಿದರು. ಉತ್ತರ ಕ್ಷೇತ್ರದಲ್ಲಿ ಹಲವರು ಐಟಿ ವಿದ್ಯಾರ್ಥಿಗಳಿದ್ದು, ಉದ್ಯೋಗ ಅರಸಿ ಬೇರೆ ಬೇರೆ ನಗರಕ್ಕೆ ತೆರಳುತ್ತಿದ್ದು, 20 ಎಕರೆ ಬುಡಾದಿಂದ ಮಂಜೂರುಗೊಳಿಸಿ ಐಟಿ ಪಾರ್ಕ್ ನಿರ್ಮಿಸಲು ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಅಧಿಕಾರಿಗಳು ಪಟ್ಟ ಶ್ರಮಕ್ಕೆ ಅಲ್ಪ ಸಮಯದಲ್ಲಿ 104 ಕಂಪನಿಗಳು ಉದ್ಯೋಗಮೇಳದಲ್ಲಿ ಭಾಗಿಯಾಗಿವೆ. ಅಲ್ಲದೇ ಆನಲೈನ್ ಮೂಲಕ ಸುಮಾರು 8000 ಅರ್ಜಿಗಳು ಮತ್ತು ನೊಂದಣಿಗಳು ದಾಖಲಾಗಿವೆ. 19 ಸಾವಿರ ಹುದ್ಧೆಗಳನ್ನು ತುಂಬಿಕೊಳ್ಳಲು ಈ ಮೇಳದಲ್ಲಿ ನಿರ್ಧರಿಸಿದ್ದಾರೆ ಎಂದರು. ಬೈಟ್
ಈ ಮೇಳದಲ್ಲಿ ಬೆಳಗಾವಿ, ಹುಬ್ಬಳ್ಳಿ ಮತ್ತು ಬೆಂಗಳೂರಿನ ಸುಮಾರು 100ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದವು. ಎಸ್‌ಎಸ್‌ಎಲ್‌ಸಿ ಯಿಂದ ಸ್ನಾತಕೋತ್ತರ ಪದವಿವರೆಗಿನ ವಿವಿಧ ಶೈಕ್ಷಣಿಕ ಅರ್ಹತೆಯುಳ್ಳ ನೂರಾರು ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಿ ಉದ್ಯೋಗಾವಕಾಶಗಳನ್ನು ಪಡೆದುಕೊಂಡರು.

Tags:

error: Content is protected !!