• ಶಹಾಪುರದಲ್ಲಿ ಶ್ರೀ ಬಸವಣ್ಣ ದೇವರ ಜಾತ್ರೋತ್ಸವ ಸಡಗರ
• ಧಗಧಗಿಸುವ ಕಿಚ್ಚು ಹಾಯ್ದು ಹರಕೆ ತೀರಿಸಿದ ಭಕ್ತರು
• 16ನೇ ಶತಮಾನದ ಇತಿಹಾಸವಿರುವ ಐತಿಹಾಸಿಕ ಪಾರಂಪರಿಕ ಜಾತ್ರೆ
• ಶ್ರಾವಣ ಮಾಸದಲ್ಲಿ ನಡೆಯಲಿದೆ ಭವ್ಯ ಮಹಾಪ್ರಸಾದ ಸೇವೆ
ಬೆಳಗಾವಿಯ ಶಹಾಪುರದಲ್ಲಿ 16ನೇ ಶತಮಾನದ ಇತಿಹಾಸವಿರುವ ಶ್ರೀ ಬಸವಣ್ಣ ದೇವರ ಭವ್ಯ ಜಾತ್ರೋತ್ಸವ ಸಡಗರದಿಂದ ನೆರವೇರಿತು. ಭಕ್ತರು ಕಿಚ್ಚು ಹಾಯುವ ಮೂಲಕ ತಮ್ಮ ಮನೋಕಾಮನೆಗಳನ್ನು ಈಡೇರಿಸುವಂತೆ ಭಗವಂತನಲ್ಲಿ ವಿಶೇಷವಾಗಿ ಪ್ರಾರ್ಥಿಸಿದರು.
ಬೆಳಗಾವಿಯ ಶಹಾಪುರದಲ್ಲಿ 16ನೇ ಶತಮಾನದಿಂದಲೂ ನಡೆದುಕೊಂಡು ಬರುತ್ತಿರುವ ಶ್ರೀ ಬಸವಣ್ಣನ ಮಂದಿರದ ಜಾತ್ರೋತ್ಸವವು ಈ ಬಾರಿಯೂ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗುತ್ತಿದೆ. ಮಾರ್ಚ್ 30 ರಂದು ಶ್ರೀ ಬಸವಣ್ಣ ದೇವರಿಗೆ ವಿಶೇಷ ಅಭಿಷೇಕ ಕಾರ್ಯಕ್ರಮಗಳು ನಡೆದವು. ಸಾಯಂಕಾಲ ಅಂಬಲಿ ಗಾಡಿಗಳ ಭವ್ಯ ಮೆರವಣಿಗೆಯೊಂದಿಗೆ ದೇವರಿಗೆ ಎಲೆ-ಅಡಿಕೆ ಸಮರ್ಪಿಸುವ ಧಾರ್ಮಿಕ ವಿಧಿಗಳು ಸಂಪನ್ನಗೊಂಡವು. ಈ ಜಾತ್ರೆಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಸರ್ವಧರ್ಮದ ಜನರು ಒಂದಾಗಿ ಪಾಲ್ಗೊಳ್ಳುವ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾಯಿತು. ಜಾತ್ರೆಯ ಪ್ರಮುಖ ಆಕರ್ಷಣೆಯಾದ ಕಿಚ್ಚು ಹಾಯುವ ಕಾರ್ಯಕ್ರಮವು ರೋಚಕವಾಗಿ ನಡೆಯಿತು. (ಫ್ಲೋ)
ಅಂಬಲಿ ಗಾಡಿಗಳೊಂದಿಗೆ ತಂದಿದ್ದ ಕಟ್ಟಿಗೆಗಳಿಗೆ ಅಗ್ನಿ ಸ್ಪರ್ಶ ಮಾಡಿ, ಬೃಹತ್ ಕಿಚ್ಚನ್ನು ನಿರ್ಮಿಸಲಾಗಿತ್ತು. ತಮ್ಮ ಮನೋಭಿಷ್ಠ ಪೂರ್ಣಗೊಂಡ ನೂರಾರು ಭಕ್ತರು ಧಗಧಗಿಸುವ ಕೆಂಡದ ಮೇಲೆ ಹಾಯುವ ಮೂಲಕ ದೇವರಿಗೆ ಭಕ್ತಿ ಸಮರ್ಪಿಸಿದರು. ವಿವಿಧ ಹಕ್ಕುದಾರರಿಂದ ದೇವರಿಗೆ ನೈವೇದ್ಯ ಅರ್ಪಣೆ ಸೇರಿದಂತೆ ಪಾರಂಪರಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.
ಇನ್ನು ಪ್ರತಿವರ್ಷ ಜಾತ್ರೆಯ ಸಂದರ್ಭದಲ್ಲಿ ನಡೆಯುತ್ತಿದ್ದ ಮಹಾಪ್ರಸಾದ ವಿತರಣೆಯಲ್ಲಿ ಈ ಬಾರಿ ಅಲ್ಪ ಬದಲಾವಣೆ ಮಾಡಲಾಗಿದೆ. ಎಲ್.ಪಿ.ಜಿ ಸಿಲಿಂಡರ್ಗಳ ಕೊರತೆಯ ಹಿನ್ನೆಲೆಯಲ್ಲಿ ಭಕ್ತರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ, ಮಹಾಪ್ರಸಾದವನ್ನು ಮುಂಬರುವ ಶ್ರಾವಣ ಮಾಸದಲ್ಲಿ ಆಯೋಜಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಕುರಿತು ಸಮಿತಿಯ ಮುಖಂಡರಾದ ಬಸವರಾಜ್ ಮಯಣ್ಣವರ ಅವರು ‘ಇನ್ ನ್ಯೂಸ್’ ಜೊತೆ ಮಾತನಾಡಿ ಹೆಚ್ಚಿನ ಮಾಹಿತಿ ಹಂಚಿಕೊಂಡಿದ್ದಾರೆ.
