ಬೆಳಗಾವಿಯ ಶಹಾಪುರ ಉಪನಗರದ ಶ್ರೀಂಗಾರಿ ಕಾಲನಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಯಶಸ್ವಿಯಾಗಿ ಜರುಗಿತು. ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಹೆಲ್ಮೆಟ್ ವಿತರಿಸುವ ಮೂಲಕ ಆಯೋಜಕರು ಸಾಮಾಜಿಕ ಜಾಗೃತಿ ಮೂಡಿಸಿದರು.
ಶಹಾಪುರದ ಖಾಸ್‌ಬಾಗ್‌ನ ಶಿವತೇಜ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಈ ಶಿಬಿರದಲ್ಲಿ ನೂರಾರು ಸಾರ್ವಜನಿಕರು ಪಾಲ್ಗೊಂಡು ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಡಾ. ಶುಭಂ ದಳವಿ (BHMS) ಮತ್ತು ಡಾ. ಶಿಲ್ಪಾ ಪೂಜಾರಿ (BHMS, CGO) ಅವರ ಮಾರ್ಗದರ್ಶನದಲ್ಲಿ ಮಧುಮೇಹ, ರಕ್ತದೊತ್ತಡ, ಕೀಲು ನೋವು ಹಾಗೂ ಎಲುಬಿನ ತೊಂದರೆಗಳಿಗೆ ಸಂಬಂಧಿಸಿದಂತೆ ತಪಾಸಣೆ ನಡೆಸಿ ಉಚಿತ ಸಲಹೆ ನೀಡಲಾಯಿತು. ಶಿಬಿರದ ಪ್ರಮುಖ ಆಕರ್ಷಣೆಯಾಗಿದ್ದ ರಕ್ತದಾನ ವಿಭಾಗದಲ್ಲಿ 50ಕ್ಕೂ ಹೆಚ್ಚು ರಕ್ತದಾನಿಗಳು ಉತ್ಸಾಹದಿಂದ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಅನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿತ್ತು.
ಶ್ರೀಂಗಾರಿ ಕಾಲನಿ, ಟೀಚರ್ಸ್ ಕಾಲನಿ, ಬಾಡಿವಾಲೆ ಕಾಲನಿ ಹಾಗೂ ಕುಂತಿ ನಗರ ಸೇರಿದಂತೆ ಸುತ್ತಮುತ್ತಲಿನ 400ಕ್ಕೂ ಹೆಚ್ಚು ನಿವಾಸಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದಿನೇಶ್ ಪಾಟೀಲ್, ಪ್ರಕಾಶ್ ಪಾಟೀಲ್, ಆಕಾಶ್ ದಲಭಜನ್, ಮಾಧವ ಮುರ್ಕುಂಬಿ, ಮಂಥನ್ ತಾರಿಹಾಳಕರ್, ರಾಜ್ ಕದಂ, ಸೋಹಮ್ ಹಿರೇಬೆಳಗಲಿ ಹಾಗೂ ಲಾಲು ಬಾಡಿವಾಲೆ ಸೇರಿದಂತೆ ಅನೇಕ ಕಾರ್ಯಕರ್ತರು ಶ್ರಮಿಸಿದರು. ಆರೋಗ್ಯದ ಜೊತೆಗೆ ರಸ್ತೆ ಸುರಕ್ಷತೆಯ ಬಗ್ಗೆಯೂ ಜಾಗೃತಿ ಮೂಡಿಸಿದ ಈ ಶಿಬಿರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
