• ಬೆಳಗಾವಿ ಸಿಟಿಸ್ 2.0 ಯೋಜನೆಗೆ ಕಂಟಕ
• ಬಿಎಸ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಗಂಭೀರ ಆರೋಪ
• ₹135 ಕೋಟಿ ಅನುದಾನ ಕಡಿತದ ಸತ್ಯಾಂಶ ಬಯಲು
• ಏಪ್ರಿಲ್ 3 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ
ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನ ಪಡೆದು ಬೆಳಗಾವಿಯ ಹೆಮ್ಮೆಯಾಗಿದ್ದ CITIIS 2.0 ಯೋಜನೆ ಈಗ ಆಡಳಿತಾತ್ಮಕ ಪತಿತನ ಹಾಗೂ ಅಕ್ರಮಗಳ ಸುಳಿಗೆ ಸಿಲುಕಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಕೈತಪ್ಪುವ ಭೀತಿ ಎದುರಾಗಿದ್ದು, ಮಂಜುನಾಥ ಬನಶಂಕರಿ ಅವರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ದೇಶದ 100 ಸ್ಮಾರ್ಟ್ ಸಿಟಿಗಳ ಪೈಕಿ ಎರಡನೇ ಶ್ರೇಯಾಂಕ ಪಡೆದಿದ್ದ ಬೆಳಗಾವಿಯ ‘ವಿಶ್ವಾಸ’ (VIISWAS) ಪ್ರಸ್ತಾವನೆಯು ಈಗ ಅಧಿಕಾರಿಗಳ ಹಸ್ತಕ್ಷೇಪ ಹಾಗೂ ಅದಕ್ಷತೆಯಿಂದಾಗಿ ಹಳ್ಳ ಹಿಡಿಯುವ ಹಂತಕ್ಕೆ ತಲುಪಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ (BSCL) ಸಂಸ್ಥೆಯು ಯೋಜನೆಯ ಅನುಷ್ಠಾನದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಅರ್ಹ ತಾಂತ್ರಿಕ ತಜ್ಞರ ಕೊರತೆ ಹಾಗೂ ರಾಜಕೀಯ ಪ್ರೇರಿತ ನೇಮಕಾತಿಗಳಿಂದಾಗಿ ರಾಷ್ಟ್ರಮಟ್ಟದ ಗೌರವಕ್ಕೆ ಧಕ್ಕೆ ತಂದಿದೆ ಎಂದು ತಜ್ಞ ಮಂಜುನಾಥ ಬನಶಂಕರಿ ಗಂಭೀರವಾಗಿ ಆರೋಪಿಸಿದ್ದಾರೆ. ₹135 ಕೋಟಿ ಅನುದಾನವು ಕೇವಲ ₹75 ಕೋಟಿಗೆ ಇಳಿಕೆಯಾಗಲು ಅಂದಿನ ಎಂಡಿ ಅವರ ಅವೈಜ್ಞಾನಿಕ ತಾಂತ್ರಿಕ ನಿರ್ಧಾರಗಳೇ ಕಾರಣ ಎಂಬ ಕಹಿಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕಿ ಕವಿತಾ ಎಂ. ವಾರಂಗಲ್ ಅವರ ಅವಧಿಯಲ್ಲಿ ಯೋಜನೆಯು ಮತ್ತಷ್ಟು ಹದಗೆಟ್ಟಿದ್ದು, ಈ ಹಿಂದೆ ಮಾಡಲಾಗಿದ್ದ ಸುಧಾರಣಾ ಕ್ರಮಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಮಹತ್ವದ ವರದಿಗಳಲ್ಲಿ ನಕಲಿ NABL ಪ್ರಮಾಣಪತ್ರಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿದ್ದು, ಲಕ್ಷಾಂತರ ರೂಪಾಯಿಗಳ ಬಿಲ್ ಪಾವತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದೆ. ಯೋಜನೆಯು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಯಾವುದೇ ಕ್ಷಣದಲ್ಲಿ ತಡೆಯಾಜ್ಞೆ ಬರುವ ಸಾಧ್ಯತೆಯಿದೆ. ಇದು ಇಡೀ ಯೋಜನೆಯನ್ನು ಹಳ್ಳ ಹಿಡಿಸುವ ಭೀತಿ ಹುಟ್ಟಿಸಿದೆ. ಇಷ್ಟೆಲ್ಲಾ ಆಡಳಿತಾತ್ಮಕ ವೈಫಲ್ಯಗಳಿದ್ದರೂ, ಬಿಎಸ್‌ಸಿಎಲ್ ತನ್ನ ತಪ್ಪುಗಳನ್ನು ಮುಚ್ಚಿ ಹಾಕಲು ನಗರ ಪಾಲಿಕೆಯ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಬನಶಂಕರಿ ಕಿಡಿಕಾರಿದ್ದಾರೆ. ಅಸಮರ್ಥ ಅಧಿಕಾರಿಗಳ ನೇಮಕಾತಿ ಮತ್ತು ಯೋಜನಾ ವಿಳಂಬದಿಂದಾಗಿ ಬೆಳಗಾವಿಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಕೂಡಲೇ ಈಗಿನ ವ್ಯವಸ್ಥಾಪಕ ನಿರ್ದೇಶಕರನ್ನು ಬದಲಿಸಿ, ಸಮರ್ಥ ಅಧಿಕಾರಿಯನ್ನು ನೇಮಿಸದಿದ್ದರೆ ಏಪ್ರಿಲ್ 3 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಅವರು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.
