• ಯುಗಾದಿ ಹಬ್ಬದಂದೇ ಬೀದಿಗೆ ಬಂದ ವೃದ್ಧ ದಂಪತಿ
• ಗಾಳಿ ಮಳೆಗೆ ಹಾರಿಹೋದ ಮನೆಯ ಮೇಲ್ಛಾವಣಿ ಪತ್ರಾಸ್
• ಹೈನುಗಾರಿಕೆ ನಂಬಿದ್ದ ಕುಟುಂಬಕ್ಕೆ ಪ್ರಕೃತಿಯಿಂದ ಭಾರಿ ಹೊಡೆತ
• ಸಂತ್ರಸ್ತರಿಗೆ ಕೂಡಲೇ ನೆರವಾಗಲು ಶಾಸಕರಿಗೆ ಕುಟುಂಬದ ಆಗ್ರಹ
ಬೆಳಗಾವಿಯಲ್ಲಿ ಹಬ್ಬದ ಸಂಭ್ರಮ ಸಡಗರ ಇರಬೇಕಾದ ಮನೆಯಲ್ಲಿ ಇಂದು ಆಕ್ರಂದನ ಮುಗಿಲು ಮುಟ್ಟಿದೆ. ನಗರದ ಗಾಂಧಿನಗರದ ಲಕ್ಷ್ಮೀ ಗಲ್ಲಿ ಕ್ರಾಸ್ ನಿವಾಸಿಗಳಾದ ಪ್ರಕಾಶ್ ಸಂಪಗಾಂವಿ ಅವರ ಕುಟುಂಬಕ್ಕೆ ವರುಣನ ಆರ್ಭಟ ಭಾರಿ ಪೆಟ್ಟು ನೀಡಿದೆ. ಭೀಕರ ಗಾಳಿ ಮಳೆಗೆ ಇವರ ಮನೆಯ ಮೇಲ್ಛಾವಣಿ ಹಾಗೂ ದನಗಳ ಕೊಟ್ಟಿಗೆಯ ಪತ್ರಾಸ್ಗಳು ಸಂಪೂರ್ಣ ಹಾರಿ ಹೋಗಿವೆ. ಕಳೆದ ಬಾರಿಯಷ್ಟೇ ಬೆಂಕಿಗೆ ಬಣಿವೆ ಸುಟ್ಟು ನಷ್ಟ ಅನುಭವಿಸಿದ್ದ ಈ ಕುಟುಂಬಕ್ಕೆ, ಈಗ ಗಾಯದ ಮೇಲೆ ಬರೆ ಎಳೆದಂತೆ ಪ್ರಕೃತಿ ವಿಕೋಪವು ಎದುರಾಗಿದೆ.
ಬೆಳಗಾವಿಯ ಗಾಂಧಿನಗರದ ಲಕ್ಷ್ಮೀ ಗಲ್ಲಿ ಕ್ರಾಸ್ ನಿವಾಸಿಗಳಾದ ಪ್ರಕಾಶ್ ಸಂಪಗಾಂವಿ ಅವರ ಮನೆ ಮೇಲ್ಛಾವಣಿ ಹಾಗೂ ದನಗಳ ಕೊಟ್ಟಿಗೆಯ ಪತ್ರಾಸ್ಗಳು ಮಳೆಗಾಳಿಗೆ ಹಾರಿ ಹೋಗಿವೆ.ಐದು ಜನರ ಕುಟುಂಬವಿರುವ ಈ ಮನೆಯಲ್ಲಿ ಎಂಟು ದನಗಳಿದ್ದು, ಹೈನುಗಾರಿಕೆಯೇ ಇವರ ಜೀವನದ ಏಕೈಕ ಆಧಾರವಾಗಿದೆ. ಮಳೆಗಾಳಿ ಶುರುವಾದಾಗ ಕೊಟ್ಟಿಗೆಯ ಪತ್ರಾಸ್ಗಳು ಎಮ್ಮೆಗಳ ಮೇಲೆ ಬಿದ್ದಿದ್ದವು. ತಕ್ಷಣವೇ ಸ್ಥಳೀಯ ಯುವಕರು ಕಾರ್ಯಪ್ರವೃತ್ತರಾಗಿ ಎಮ್ಮೆಗಳನ್ನು ಸುರಕ್ಷಿತವಾಗಿ ಹೊರತಂದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಆದರೆ, ಮಳೆಗೆ ಮನೆಯಲ್ಲಿದ್ದ ಒಣ ಹುಲ್ಲು ಮತ್ತು ಮೇವು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಅತ್ತ ದನಗಳಿಗೂ ಆಹಾರವಿಲ್ಲದೆ, ಇತ್ತ ತಮಗೂ ನೆಲೆ ಇಲ್ಲದೆ ಕುಟುಂಬವು ಕಂಗಾಲಾಗಿದೆ.
ಮನೆಯ ಯಜಮಾನ ಪ್ರಕಾಶ್ ಸಂಪಗಾಂವಿ ಅವರಿಗೆ ವಯಸ್ಸಾಗಿದ್ದು, ದುಡಿಯಲು ಅಶಕ್ತರಾಗಿದ್ದಾರೆ. “ಮಕ್ಕಳು ಯಾವುದೇ ಕೆಲಸ ಮಾಡಲ್ಲ, ನಮಗೆ ವಯಸ್ಸಾಗಿದೆ.. ಎಲ್ಲರೂ ಯುಗಾದಿ ಆಚರಿಸುತ್ತಿದ್ದರೆ ನಾವು ಬೀದಿಗೆ ಬಂದಿದ್ದೇವೆ” ಎಂದು ಕಮಲ್ ಸಂಪಗಾಂವಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮನೆಯಲ್ಲಿ 5 ಜನರಿರುತ್ತೇವೆ. 8 ದನಗಳಿವೆ. ಕೊಟ್ಟಿಗೆ ಮತ್ತು ಮನೆ ಮೇಲಿನ ಛಾವಣಿ ಕೂಡ ಹಾರಿ ಹೋಗಿದೆ. ನಮ್ಮ ಕಾಲಿಗೆಪೆಟ್ಟಾಗಿದೆ. ಒಣ ಹುಲ್ಲು ಕೂಡ ಹಾನಿಗೊಳಗಾಗಿದೆ. ಹೈನುಗಾರಿಕೆ ಮಾಡಿಕೊಂಡು ಕೆಲಸ ಮಾಡುತ್ತೇವೆ. ಎಮ್ಮೆಗಳನ್ನು ಕೂಡ ಸ್ಥಳೀಯ ಯುವಕರು ಹೊರ ತಂದಿದ್ದಾರೆ. ಹಾರಿಹೋದ ಪತ್ರಾಸ್ ಬೇರೆ ಕಡೆ ಹೋಗಿ ಬಿದ್ದಿವೆ. ನಮಗೆ ಅನುಕೂಲ ಮಾಡಕೊಡಲಿ. ಹೈನುಗಾರಿಕೆಯ ಮೇಲೆಯೇ ಹೊಟ್ಟೆ ತುಂಬುತ್ತದೆ. ನಮ್ಮ ಶಾಸಕರು ದಯವಿಟ್ಟು ಸಹಾಯ ಮಾಡಲಿ ಎಂದು ಪ್ರಕಾಶ್ ಸಂಪಗಾಂವಿ ಆಗ್ರಹಿಸಿದರು.
ಕ್ಷಣವೇ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತ ಈ ಬಡ ಕುಟುಂಬದ ನೆರವಿಗೆ ಧಾವಿಸಿ, ಸೂಕ್ತ ಪರಿಹಾರ ನೀಡಬೇಕೆಂದು ಸಂತ್ರಸ್ತರು ಆಗ್ರಹಿಸಿದ್ದಾರೆ.
