• ಬಿಮ್ಸ್’ನಲ್ಲಿ ಅರ್ಥಪೂರ್ಣ ವಿಶ್ವ ಶ್ರವಣ ದಿನ
• ಮಕ್ಕಳಿಗೆ ಉಚಿತ ಶ್ರವಣ ಯಂತ್ರ ವಿತರಣೆ
• ಆರೋಗ್ಯ ಸೇವೆಯೇ ನಮ್ಮ ಮೊದಲ ಆದ್ಯತೆ
• ಆರಂಭಿಕ ಪತ್ತೆಯಿಂದ ಶ್ರವಣ ದೋಷ ತಡೆ

ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಶ್ರವಣ ದಿನದ ಕಾರ್ಯಕ್ರಮದಲ್ಲಿ ಶಾಸಕ ಆಸೀಫ್ ಸೇಠ್ ಭಾಗವಹಿಸಿ, ಶ್ರವಣ ದೋಷವಿರುವ ಮಕ್ಕಳಿಗೆ ಉಚಿತ ಶ್ರವಣ ಯಂತ್ರಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಸೇವೆಯ ಮಹತ್ವವನ್ನು ಅವರು ಸಾರಿದರು.
ಬೆಳಗಾವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ವತಿಯಿಂದ ಶನಿವಾರ ನಡೆದ ‘ವಿಶ್ವ ಶ್ರವಣ ದಿನ’ದ ನಿಮಿತ್ಯ ಸಮುದಾಯದಿಂದ ತರಗತಿಯವವರೆಗೆ: ಪ್ರತಿ ಮಗುವಿಗೂ ಶ್ರವಣ ಅರೈಕೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಸಕ ಆಸೀಫ್ ಸೇಠ್, ಕಾರ್ಯಕ್ರಮದ ಮುಖ್ಯ ಪೋಷಕರಾಗಿ ಬಿಮ್ಸ್’ನ ಡೀನ್ ಮತ್ತು ನಿರ್ದೇಶಕ ಡಾ. ಅಶೋಕ್ ಕುಮಾರ್ ಶೆಟ್ಟಿ, ಮುಖ್ಯ ಆಡಳಿತಾಧಿಕಾರಿ ರೇಷ್ಮಾ ತಳಿಕೋಟಿ, ವೈದ್ಯಕೀಯ ಅಧೀಕ್ಷಕ ಡಾ. ಎರ್ರಣ್ಣ ಪಲ್ಲೇದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಗದೀಶ್ ಗಣಗಿ, ರೆಸಿಡೆಂಟ್ ಮೆಡಿಕಲ್ ಆಫೀಸರ್ ಡಾ. ಸರೋಜಾ ಟಿಗಡಿ ಹಾಗೂ ಪ್ರಾಂಶುಪಾಲ ಡಾ. ಉಮೇಶ್ ಕುಲಕರ್ಣಿ ಅವರು ಉಪಸ್ಥಿತರಿದ್ದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು, “ಆರೋಗ್ಯ ಸೇವೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಳು ಮತ್ತು ಬಿಮ್ಸ್ ತಂಡದ ಇಂತಹ ಉತ್ತಮ ಪ್ರಯತ್ನಗಳು ನಾಗರಿಕರ ಜೀವನಮಟ್ಟವನ್ನು ಸುಧಾರಿಸಲು ಸಹಕಾರಿಯಾಗುತ್ತವೆ,” ಎಂದು ಶ್ಲಾಘಿಸಿದರು. ಶ್ರವಣ ದೋಷದ ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆಗೆ ಒತ್ತು ನೀಡುವುದು ಅತ್ಯಂತ ಅವಶ್ಯಕವೆಂದು ಅವರು ಇದೇ ವೇಳೆ ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಶೃತಿ ವಿ. ಎಸ್., ಬಿಮ್ಸ್ ಆಸ್ಪತ್ರೆಯಲ್ಲಿ ಈಗಾಗಲೇ ಏಳು ಯಶಸ್ವಿ ‘ಕೋಕ್ಲಿಯರ್ ಇಂಪ್ಲಾಂಟ್’ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗಿದ್ದು, ಇದು ಗಂಭೀರ ಶ್ರವಣ ದೋಷವಿರುವ ರೋಗಿಗಳ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ ಎಂದು ಮಾಹಿತಿ ನೀಡಿದರು.
ಇನ್ನು, ದ್ವಿಪಕ್ಷೀಯ ತೀವ್ರತರವಾದ ಶ್ರವಣ ದೋಷವಿರುವ ಮತ್ತು ಯುಡಿಐಡಿ (UDID) ಕಾರ್ಡ್ ಹೊಂದಿರುವ ಮಕ್ಕಳಿಗೆ ಉಚಿತ ಶ್ರವಣ ಯಂತ್ರಗಳನ್ನು ವಿತರಿಸುವ ಮೂಲಕ ಅವರಿಗೆ ಹೊಸ ಭರವಸೆಯನ್ನು ನೀಡಲಾಯಿತು.ಈ ವೇಳೆ ಶ್ರವಣ ಯಂತ್ರಗಳನ್ನು ಪಡೆದ ಲಾಭಾರ್ಥಿಗಳು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
