ಬೆಳಗಾವಿ ಜಿಲ್ಲೆಯ ಅರಭಾವಿ ಮಠದಲ್ಲಿ ಜಗದ್ಗುರು ಶ್ರೀಮದ್ ದುರದುಂಡೀಶ್ವರರ ಜಾತ್ರಾ ಮಹೋತ್ಸವ ಕಳೆಗಟ್ಟಿದೆ. ರುದ್ರಾಭೀಷೇಕ, ಭವ್ಯ ಪಲ್ಲಕ್ಕಿ ಉತ್ಸವ ಹಾಗೂ ಧರ್ಮ ಚಿಂತನ ಗೋಷ್ಠಿಗಳ ಮೂಲಕ ಮಠದಲ್ಲಿ ಧಾರ್ಮಿಕ ಸಂಭ್ರಮ ಮನೆಮಾಡಿದ್ದು, ಸಾವಿರಾರು ಭಕ್ತರು ಶ್ರೀಗಳ ದರ್ಶನ ಪಡೆದರು.
ಬೆಳಗಾವಿ ಜಿಲ್ಲೆಯ ಅರಭಾವಿಯ ಶ್ರೀ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಸಿದ್ಧಸಂಸ್ಥಾನ ಮಠದಲ್ಲಿ ಜಗದ್ಗುರು ಶ್ರೀಮದ್ ದುರದುಂಡೀಶ್ವರರ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಈ ಧಾರ್ಮಿಕ ಉತ್ಸವದ ಅಂಗವಾಗಿ ಬೆಳಗಿನ ಜಾವ ದುರದುಂಡೀಶ್ವರರ ಪವಿತ್ರ ಗದ್ದುಗೆಗೆ ವಿಶೇಷ ರುದ್ರಾಭೀಷೇಕ ಹಾಗೂ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ ವಿವಿಧ ವಾದ್ಯಮೇಳಗಳೊಂದಿಗೆ ಜರುಗಿದ ಭವ್ಯ ಪಲ್ಲಕ್ಕಿ ಉತ್ಸವಕ್ಕೆ ಭಕ್ತಸಾಗರವೇ ಸಾಕ್ಷಿಯಾಯಿತು. ಇದೇ ಸಂದರ್ಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪುಸ್ತಕ ಬಿಡುಗಡೆ ಹಾಗೂ ಧರ್ಮ ಚಿಂತನ ಗೋಷ್ಠಿ ಕಾರ್ಯಕ್ರಮಗಳು ಜರುಗಿದ್ದು, ಭಕ್ತರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಲಾಯಿತು.
ಅರಭಾವಿ ಮಠದ ಗುರುಬಸವಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಸಮಾರಂಭದಲ್ಲಿ ಹಂದಿಗುಂದ ವಿರಕ್ತಮಠದ ಶಿವಾನಂದ ಮಹಾಸ್ವಾಮಿಗಳು, ಕಡಕೋಳದ ಸಚ್ಚಿದಾನಂದ ಸ್ವಾಮೀಜಿ ಹಾಗೂ ಬೆಲ್ಲದ ಬಾಗೇವಾಡಿಯ ಶಿವಾನಂದ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಂಪಾದಕ ಸಿ.ಕೆ. ನಾವಲಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಠದ ಪರಂಪರೆಯನ್ನು ಸ್ಮರಿಸಿದರು. ಜಾತ್ರಾ ಮಹೋತ್ಸವದ ನಿಮಿತ್ತ ಮಠದ ಆವರಣದಲ್ಲಿ ಭಕ್ತರಿಗಾಗಿ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
