Bagalkote

ಸತ್ತು ಬದುಕಿ ಬಂದ ಹಾಜಿ ಮುಬಾರಕ್!!?? ರೋಡ್ ಹಂಪ್ಸ್ ದಡಕಿಗೆ ಮರುಜೀವ ಪಡೆದ ವೃದ್ಧ … ಜಮಖಂಡಿಯಲ್ಲಿ ಹರಡಿದ ಅಚ್ಚರಿಯ ಸುದ್ದಿ!

Share

• ಜಮಖಂಡಿಯಲ್ಲಿ ಸತ್ತು ಬದುಕಿದ ವೃದ್ಧ
• ರೋಡ್ ಹಂಪ್ಸ್ ನೀಡಿತು ಮುಬಾರಕ್‌ಗೆ ಮರುಜೀವ
• ಡೆತ್ ಸರ್ಟಿಫಿಕೇಟ್ ನೀಡದಿದ್ದರೂ ಮೃತರೆಂದು ಭಾವಿಸಿದ ಜನ
• ಆಸ್ಪತ್ರೆ ಮುಂದೆ ಸಾವಿರಾರು ಜನರ ಹೈಡ್ರಾಮಾ

ಸತ್ತಿದ್ದಾನೆ ಎಂದು ಭಾವಿಸಿ ಅಂತಿಮ ಸಂಸ್ಕಾರಕ್ಕೆ ಕರೆತರುತ್ತಿದ್ದ ವ್ಯಕ್ತಿಯೊಬ್ಬರು ಮಾರ್ಗ ಮಧ್ಯೆ ಅನಿರೀಕ್ಷಿತವಾಗಿ ಉಸಿರಾಡಿದ ಘಟನೆ ಜಮಖಂಡಿಯಲ್ಲಿ ಸಂಚಲನ ಮೂಡಿಸಿದೆ. ವೈದ್ಯಕೀಯ ಲೋಕದ ಅಚ್ಚರಿಯೋ ಅಥವಾ ಸಂಬಂಧಿಕರ ಗೊಂದಲವೋ? ಎಂಬುದು ತಿಳಿಯದಾಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಮೋಮಿನ್ ಗಲ್ಲಿಯ ಹಾಜಿ ಮುಬಾರಕ್ ಅವಟಿ (65) ಎಂಬುವವರು ಸಾವಿನ ದವಡೆಯಿಂದ ಪಾರಾಗಿ ಬಂದ ವ್ಯಕ್ತಿ. ಕಿಡ್ನಿ ವೈಫಲ್ಯ ಹಾಗೂ ಹೃದಯಾಘಾತದಿಂದ ಬಳಲುತ್ತಿದ್ದ ಇವರನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗುವುದು ಕಷ್ಟ ಎಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ, ಕುಟುಂಬಸ್ಥರು ‘ಡಿಸ್ಚಾರ್ಜ್ ಅಗೈನ್ಸ್ಟ್ ಮೆಡಿಕಲ್ ಅಡ್ವೈಸ್’ ಪಡೆದು ವೆಂಟಿಲೇಟರ್ ತೆರವುಗೊಳಿಸಿ ಮನೆಗೆ ಕರೆತರುತ್ತಿದ್ದರು. ಈ ವೇಳೆ ವೆಂಟಿಲೇಟರ್ ತೆಗೆದ ತಕ್ಷಣ ಉಸಿರಾಟ ನಿಂತಂತೆ ಕಂಡುಬಂದಿದ್ದರಿಂದ, ಮುಬಾರಕ್ ಮೃತಪಟ್ಟಿದ್ದಾರೆ ಎಂದು ಭಾವಿಸಿದ ಸಂಬಂಧಿಕರು ಅಂತಿಮ ಸಂಸ್ಕಾರಕ್ಕಾಗಿ ಸಿದ್ಧತೆ ಮಾಡಿಕೊಂಡು ಆಂಬ್ಯುಲೆನ್ಸ್‌ನಲ್ಲಿ ಜಮಖಂಡಿಗೆ ಪ್ರಯಾಣ ಬೆಳೆಸಿದ್ದರು.
ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಆಂಬ್ಯುಲೆನ್ಸ್ ಲೋಕಾಪುರ ಸಮೀಪ ಬರುತ್ತಿದ್ದಾಗ ರಸ್ತೆಯ ಹಂಪ್ಸ್‌ಗೆ ವಾಹನ ಜೋರಾಗಿ ದಡಕಿದೆ. ಈ ಆಘಾತಕ್ಕೆ ಮೃತಪಟ್ಟಿದ್ದಾರೆನ್ನಲಾದ ಮುಬಾರಕ್ ಅವರಲ್ಲಿ ಇದ್ದಕ್ಕಿದ್ದಂತೆ ಚಲನವಲನ ಕಂಡುಬಂದು, ಪುನಃ ಉಸಿರಾಡಲು ಆರಂಭಿಸಿದ್ದಾರೆ. ಇದನ್ನು ಕಂಡು ದಂಗಾದ ಸಂಬಂಧಿಕರು ತಕ್ಷಣವೇ ಅವರನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆ ಆವರಣದಲ್ಲಿ ಸಾವಿರಾರು ಜನ ಜಮಾಯಿಸಿದ್ದು, ಸತ್ತ ವ್ಯಕ್ತಿ ಮರುಜೀವ ಪಡೆದಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಸದ್ಯ ಮುಬಾರಕ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಜಮಖಂಡಿ ತಾಲೂಕು ವೈದ್ಯ ಡಾ. ಕೃಷ್ಣಾ ಬಣ್ಣದ ಅವರು, ಬೆಳಗಾವಿಯ ಆಸ್ಪತ್ರೆಯ ದಾಖಲೆಗಳಲ್ಲಿ ಎಲ್ಲಿಯೂ ರೋಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢೀಕರಿಸಿಲ್ಲ. ರೋಗಿಯ ಸ್ಥಿತಿ ಗಂಭೀರವಾಗಿದ್ದಾಗ ವೆಂಟಿಲೇಟರ್ ತೆಗೆದರೆ ಉಸಿರಾಟ ಸ್ಥಗಿತಗೊಂಡಂತೆ ಭಾಸವಾಗುವುದು ಸಹಜ. ಕುಟುಂಬಸ್ಥರು ತಪ್ಪು ಗ್ರಹಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಭಾವಿಸಿದ್ದರು. ರಸ್ತೆಯ ಹಂಪ್ಸ್ ದಾಟುವಾಗ ಆದ ದೈಹಿಕ ಒತ್ತಡದಿಂದ ಪುನಃ ಉಸಿರಾಟ ಪ್ರಕ್ರಿಯೆ ಚುರುಕುಗೊಂಡಿರಬಹುದು ಎಂದು ತಿಳಿಸಿದ್ದಾರೆ.

Tags:

error: Content is protected !!