State

ವಿಧಾನಸಭೆಯಲ್ಲಿ ಬೆಳಗಾವಿ ಧ್ವನಿ: 40 ವರ್ಷಗಳಿಂದ ದೊಡ್ಡ ಉದ್ಯಮಗಳಿಲ್ಲದೆ ಯುವಕರ ವಲಸೆ; ಐಟಿ ಪಾರ್ಕ್‌ಗೆ ಶಾಸಕ ಅಭಯ ಪಾಟೀಲ ಆಗ್ರಹ!

Share

“ಬೆಳಗಾವಿಯ ಕೈಗಾರಿಕಾ ಅಭಿವೃದ್ಧಿಗೆ ಗ್ರಹಣ ಹಿಡಿದಿದೆಯೇ? 40 ವರ್ಷಗಳಿಂದ ಕುಂದಾನಗರಿಗೆ ಯಾವುದೇ ದೊಡ್ಡ ಉದ್ಯಮಗಳು ಯಾಕೆ ಬಂದಿಲ್ಲ? ಈ ಗಂಭೀರ ಪ್ರಶ್ನೆಯನ್ನು ವಿಧಾನಸಭೆಯಲ್ಲಿ ಎತ್ತಿರುವ ಶಾಸಕ ಅಭಯ ಪಾಟೀಲ, ಬೆಳಗಾವಿ ಯುವಕರ ವಲಸೆ ತಡೆಯಲು ತಕ್ಷಣ ಐಟಿ ಪಾರ್ಕ್ ಸ್ಥಾಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.”

ವಿಧಾನಸಭೆಯಲ್ಲಿ ಬೆಳಗಾವಿಯ ಕೈಗಾರಿಕಾ ಹಿನ್ನಡೆಯ ಬಗ್ಗೆ ಮಾತನಾಡಿದ ಶಾಸಕ ಅಭಯ ಪಾಟೀಲ, ಕಳೆದ ನಾಲ್ಕು ದಶಕಗಳಿಂದ ಬೆಳಗಾವಿಯಲ್ಲಿ ಒಂದೂ ಬೃಹತ್ ಕೈಗಾರಿಕೆ ಸ್ಥಾಪನೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 40 ವರ್ಷಗಳ ಹಿಂದೆ ‘ಇಂಡಾಲ್’ ಕಂಪನಿ ಬಂದ ನಂತರ ಯಾವುದೇ ದೊಡ್ಡ ಸಂಸ್ಥೆಗಳು ಈ ಭಾಗಕ್ಕೆ ಬಂದಿಲ್ಲ. ಇದರಿಂದಾಗಿ ಇಲ್ಲಿನ ಸುಶಿಕ್ಷಿತ ಯುವಕರು ಉದ್ಯೋಗ ಅರಸಿ ಪುಣೆ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಸರ್ಕಾರದ ‘ಬಿಯಾಂಡ್ ಬೆಂಗಳೂರು’ ಯೋಜನೆ ಕೇವಲ ಹುಬ್ಬಳ್ಳಿ-ಧಾರವಾಡಕ್ಕೆ ಸೀಮಿತವಾಗಬಾರದು, ಬೆಳಗಾವಿಗೂ ಐಟಿ ಪಾರ್ಕ್ ಮತ್ತು ಬೃಹತ್ ಕೈಗಾರಿಕೆಗಳನ್ನು ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಕಲಮಂದಿರದಲ್ಲಿ ನಡೆದ ‘ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್’ ಉಪಕ್ರಮವನ್ನು ಸ್ವಾಗತಿಸಿದ ಶಾಸಕರು, ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಸಂಬಂಧಿತ ಇಲಾಖೆಗಳು ಉದ್ಯಮಿಗಳ ವಿಶೇಷ ಸಭೆಯನ್ನು ಬೆಳಗಾವಿಯಲ್ಲಿ ಆಯೋಜಿಸಬೇಕು ಎಂದು ಸಲಹೆ ನೀಡಿದರು. ಅಭಯ ಪಾಟೀಲ ಅವರ ಪ್ರಶ್ನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಬೆಳಗಾವಿಯ ಕೈಗಾರಿಕಾ ಅವಕಾಶಗಳನ್ನು ವಿಸ್ತರಿಸಲು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಶೀಘ್ರದಲ್ಲೇ ಉದ್ಯಮಿಗಳ ಸಭೆಯನ್ನು ಕರೆಯಲಾಗುವುದು ಎಂದು ಭರವಸೆ ನೀಡಿದರು.

Tags:

error: Content is protected !!